ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಹೈನುಗಾರಿಕೆ ರೈತರ ಪ್ರಮುಖ ಜೀವನಾಧಾರವಾಗಿರುವ ಕಸುಬು ಆಗಿದ್ದು ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲೂಕಿನಲ್ಲಿ ಜಾನುವಾರುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನಾವೆಲ್ಲರೂ ನೀಡಬೇಕು ಎಂದು ಪಶುವೈದ್ಯ ಡಾ.ಹರೀಶ್ ತಿಳಿಸಿದರು. ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕೆ.ಆರ್.ನಗರ ಹಾಗೂ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಆರನೇ ಸುತ್ತಿನ ಕಾಲುಬಾಯಿ ಜ್ವರಕ್ಕೆ ಜಾನುವಾರುಗಳಿಗೆ ಉಚಿತವಾಗಿ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಂದೆಡೆ ಹವಾಮಾನ ವೈಪರಿತ್ಯ ಹಾಗೂ ಮೇವಿನ ಸಮಸ್ಯೆಯಿಂದ ಜಾನುವಾರುಗಳು- ಸಾವನ್ನಪ್ಪಿದರೆ, ಇನ್ನೊಂದಡೆ ಕಾಲುಬಾಯಿ ಜ್ವರದಂತಹ ಮಾರಕ ಕಾಯಿಲೆಗಳು ದನ ಕರುಗಳನ್ನು ಬಾಧಿಸುತ್ತಿವೆ. ಇದನ್ನು ಮನಗಂಡು ಸರ್ಕಾರ ಜಾನುವಾರುಗಳಿಗೆ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದು ರೈತರು, ಗ್ರಾಮದ ಮುಖಂಡರು ಸಹಕಾರ ನೀಡ ಬೇಕು ಎಂದರು.
ಮನೆಮನೆಗೆ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಕಾಲು ಬಾಯಿ ಜ್ವರದ ನಿರ್ಮೂಲನೆಗೆ ಸರ್ಕಾರ ಪಣತೊಟ್ಟಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಕಾಲುಬಾಯಿ ರೋಗವು ದನ, ಎಮ್ಮೆ, ಹಂದಿ ಮುಂತಾದ ಸೀಳುಗೊರಸುಳ್ಳ ಜಾನುವಾರುಗಳ ಮಾರಕ ರೋಗವಾಗಿದ್ದು, ರೋಗದಿಂದ ಜಾನುವಾರು ಗುಣಮುಖವಾದರೂ ಸಹ ಮುಂದೆ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ಮತ್ತು ಇಳುವರಿಯಲ್ಲಿ ಇಳಿ ಮುಖವಾಗು ವುದರಿಂದ ರೈತರಿಗೆ ಆರ್ಥಿಕ ನಷ್ಟವಾಗುತ್ತದೆ
ಕಾಲುಬಾಯಿ ರೋಗವು ಒಂದು ವೈರಾಣು ರೋಗವಾಗಿದ್ದು, ಲಸಿಕೆ ಹಾಕುವುದೊಂದೇ ರೋಗ ನಿಯಂತ್ರಣದ ಏಕೈಕ ಮಾರ್ಗ ಆದ್ದರಿಂದ ರೋಗದಿಂದ ಪೂರ್ಣ ಸುರಕ್ಷತೆಗಾಗಿ ಸತತವಾಗಿ ಕನಿಷ್ಟ ಮೂರು ಬಾರಿ ಲಸಿಕೆ ಹಾಕುವುದು ಅತ್ಯಗತ್ಯವಾಗಿರುತ್ತದೆ.
ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಸಹ, ಪ್ರತಿ ಆರು ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ, ತಪ್ಪದೇ ರೈತರು, ಗ್ರಾಮಸ್ಥರು ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದರು.
ಚೀರನಹಳ್ಳಿ ಗ್ರಾಮದಲ್ಲಿ ಸುಮಾರು 900 ದನಗಳಿಗೆ ಹಾಗೂ 100 ಎಮ್ಮೆಗಳಿಗೆ ಲಸಿಕೆಯನ್ನು ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಅಕ್ಟೋಬರ್ 21ರಿಂದ ನವಂಬರ್ 20ರವರೆಗೆ ತಾಲೂಕಿನ ಅತ್ಯಂತ ಕಾಲುಬಾಯಿ ಜ್ವರದ ವಿರುದ್ಧ ಲಸಿಕೆಯನ್ನು ಹಾಕಲಾಗುತ್ತದೆ ವೈದ್ಯರು ಹಾಗೂ ಸಿಬ್ಬಂದಿಗಳು ಪ್ರತಿಯೊಬ್ಬ ರೈತನ ಮನೆ ಬಾಗಿಲಿಗೆ ಹೋಗಿ ಲಸಿಕೆಯನ್ನು ಹಾಕಲಾಗುತ್ತಿದೆ, ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲೂಕಿನಾದ್ಯಂತ ಸುಮಾರು 70,000 ಜಾನುವಾರಗಳಿಗೆ ಲಸಿಕೆಯನ್ನು ಹಾಕಲಾಗುತ್ತಿದೆ ರೈತರು ಸಹಕರಿಸಿ.
- ಡಾ.ಮಂಜುನಾಥ್, ಸಹಾಯಕ ನಿರ್ಧೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು.
ಈ ಸಂದರ್ಭದಲ್ಲಿ ಪಶು ವೈದ್ಯ ಡಾ.ರಾಮು ,ಸಿಬ್ಬಂದಿಗಳಾದ ವೈರಮುಡಿ, ಕೃಷ್ಣಸ್ವಾಮಿ, ರಂಗಣ್ಣಗೌಡ, ರಾಮಸ್ವಾಮಿ, ಯೋಗಚಾರ್ ಇದ್ದರು.