ಚಾಮರಾಜನಗರ: ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿಗೆ ಶ್ರಮಿಸಿದ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ರವರ ಕೊಡುಗೆ ಅಪಾರವೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್. ಎನ್ ಋಗ್ವೇದಿ ತಿಳಿಸಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ನಡೆದ 141ನೆಯ ಸರ್ ಮಿರ್ಜಾ ಇಸ್ಮಾಯಿಲ್ ರವರ ಜನ್ಮದಿನದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ ನವರಿಂದ ಸ್ಥಾಪಿಸಲ್ಪಟ್ಟಂತಹ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದ ನಿವೇಶನವನ್ನು ನೀಡಿ ಬೃಹತ್ ಮಂದಿರವನ್ನು ನಿರ್ಮಾಣ ಮಾಡಲು ಹಾಗೂ ಕನ್ನಡ ಸಾಹಿತ್ಯವನ್ನು ಹರಡಲು ಶ್ರಮಿಸಿದ ಮಹಾನ್ ವ್ಯಕ್ತಿ . ಉತ್ತಮ ಆಡಳಿತಗಾರರಾಗಿಯೂ ಕಾರ್ಯನಿರ್ವಹಿಸಿದ ಇಸ್ಮಾಯಿಲ್ ರವರು ವಿಶ್ವ ಪ್ರಸಿದ್ಧವಾದ ಮೈಸೂರು ಕೃಷ್ಣರಾಜಸಾಗರದಲ್ಲಿ ಉದ್ಯಾನವನವನ್ನು ನಿರ್ಮಿಸಿ ವಿಶ್ವಖ್ಯಾತಿಗೊಳಿಸಿದವರು. ಕೈಗಾರಿಕೆ, ನೀರಾವರಿ, ಶಿಕ್ಷಣ ,ವಸತಿ ನಿಲಯ, ರಸ್ತೆ ,ಸೇತುವೆ ಅಭಿವೃದ್ಧಿ ಹಾಗು ಹಲವು ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ ಇವರ ಸ್ಮರಣೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿರುವುದು ಹೆಮ್ಮೆಯಾಗಿದೆ. ಶತಮಾನದ ಹಿಂದೆಯೇ ಹಳ್ಳಿಹಳ್ಳಿಗೂ ವಿದ್ಯುತ್ ಸೌಲಭ್ಯವನ್ನು ನೀಡಿ ಸುಮಾರು 180ಕ್ಕೂ ಹೆಚ್ಚು ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ನೀಡಿದ ದೂರದೃಷ್ಟಿಯ ಚಿಂತನಗಾರರು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಳ್ಳೇಗಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗರಾಜುರವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಅಭಿವೃದ್ಧಿಗೆ ಶ್ರಮಿಸಿದ ಸರ್ವರನ್ನು ಸ್ಮರಿಸಿಕೊಳ್ಳುವ ಮೂಲಕ ನಾಡು, ನುಡಿ, ಜಲ, ಭಾಷೆಯನ್ನು ಅಭಿವೃದ್ಧಿಗೊಳಿಸಿದ ಸರ್ವರಿಗೂ ಗೌರವ ಸಲ್ಲಿಸುವುದು ನಮ್ಮ ಕಾರ್ಯವಾಗಿದೆ. ಸರ್ ಎಂ ವಿಶ್ವೇಶ್ವರಯ್ಯನವರಂತೆ ಮೈಸೂರು ಸಂಸ್ಥಾನದಲ್ಲಿ ಕೈಗಾರಿಕೆಗಳನ್ನು ಬೆಳೆಸಿದ ಮಹಾನ್ ವ್ಯಕ್ತಿ. ಮೈಸೂರು ನಗರವನ್ನು ಸುಂದರಗೊಳಿಸಿ ವಿಶಾಲ ರಸ್ತೆಗಳ ನಿರ್ಮಾಣ ಕಟ್ಟಡಗಳ ಬೆಳವಣಿಗೆಗೆ ಇವರ ಕೊಡುಗೆ ಅಪಾರವೆಂದರು. ಚಾಮರಾಜನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸಿ ಕನ್ನಡದ ಮಹನೀಯರನ್ನು ಸ್ಮರಿಸಿಕೊಳ್ಳುವ, ಹಾಗೂ ಕೊಡುಗೆಗಳ ಬಗ್ಗೆ ತಿಳಿಸುವ ಕಾರ್ಯ ಮಾಡುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿ ಕೆ ಆರಾಧ್ಯರವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಗೌರವದ ಸಂಸ್ಥೆಯಾಗಿದೆ. ಶತಮಾನಗಳಿಂದಲೂ ಕನ್ನಡ ಭಾಷೆ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪ್ರತಿ ಮಂಗಳವಾರ ಸಂಜೆ ವಿಶೇಷ ಕಾರ್ಯಕ್ರಮ ನಡೆಸುವ ಮೂಲಕ ಹಾಗೂ ವಿಶೇಷ ಮಹನೀಯರ ದಿನಗಳ ಸ್ಮರಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಋಗ್ವೇದಿಯವರು ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿ ಪ್ರತಿಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿ , ಕನ್ನಡದ ಕೆಲಸವನ್ನು ಸರ್ವರು ಸೇರಿ ನಿರ್ವಹಿಸೋಣ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ ಪದ್ಮ ಪುರುಷೋತ್ತಮ್ ಪರಮೇಶ್ವರಪ್ಪ ಗೋವಿಂದರಾಜು,ಲೋಕೇಶ್, ಮಂಜುನಾಥ್ ಉಪಸ್ಥಿತರಿದ್ದರು.