ಪಾಂಡವಪುರ: ತಾಲ್ಲೂಕಿನ ಚಂದ್ರೆ ಗ್ರಾಮದ ಕೆರೆಯಲ್ಲಿ ಕೈ ಕಾಲು ತೊಳೆಯಲು ಹೋಗಿದ್ದ ಎನ್‌ಎಸ್‌ಎಸ್ ಶಿಬಿರಾರ್ಥಿಯೊಬ್ಬ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ಪಾಂಡವಪುರ ಪಟ್ಟಣದ ವಿಜಯ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಗಜೇಂದ್ರ ಎಂದು ಗುರುತಿಸಲಾಗಿದೆ. ಈತ ಮೂಲತಃ ಮೈಸೂರು ಜಿಲ್ಲೆ ನಾಗವಾಲ ಗ್ರಾಮದವನು ಎಂದು ತಿಳಿದುಬಂದಿದೆ.
ಪಾಂಡವಪುರ ಪಟ್ಟಣದ ವಿಜಯ ಪದವಿ ಪೂರ್ವ ಕಾಲೇಜಿನಿಂದ ಚಂದ್ರೆ ಗ್ರಾಮದಲ್ಲಿ ಅ.೨೫ ರಿಂದ ೩೧ ರವರೆಗೆ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಕ್ಷಕರ ಜೊತೆ ವಿಧ್ಯಾರ್ಥಿಗಳು ಸೇರಿ ಬೆಳಿಗ್ಗೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ಗ್ರಾಮವನ್ನು ಸ್ವಚ್ಛಗೊಳಿಸಿ ಮಧ್ಯಾಹ್ನ ಊಟಕ್ಕೆ ಬಂದ ಸಮಯದಲ್ಲಿ ಗಜೇಂದ್ರ ಕೈ ಕಾಲು ತೊಳೆಯಲು ಕೆರೆಯ ಬಳಿ ಹೋಗಿದ್ದು, ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿರುವುದಾಗಿ ಹೇಳಲಾಗಿದೆ. ಮೃತ ಗಜೇಂದ್ರನ ಮೃತದೇಹವನ್ನು ಕೆರೆಯಿಂದ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಪಾಂಡವಪುರ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.