ರಾಮಮನಗರ: ಕೈ ಜೋಡಿಸಿ ನಿಮ್ಮ ಪಾದಗಳಿಗೆ ಶಿರಸಾವಹಿಸಿ ಬೇಡಿಕೊಳ್ತಿದ್ದೇನೆ. ಒಂದೇ ಒಂದು ಅವಕಾಶ ಕೊಡಿ ಎಂದು ಚನ್ನಪಟ್ಟಣ ಕ್ಷೇತ್ರದ ಜನತೆಯನ್ನ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೇಡಿಕೊಂಡಿದ್ದಾರೆ.
ಉಪಚುನಾವಣೆ ಹಿನ್ನೆಲೆ ಮಾಕಳಿ ಗ್ರಾಮದ ಪ್ರಚಾರದಲ್ಲಿ ಮಾತನಾಡಿದ ಅವರು, ಕುಮಾರಣ್ಣನ ನಾಯಕತ್ವಕ್ಕೆ ಇದು ಅಗ್ನಿ ಪರೀಕ್ಷೆ. ಇಲ್ಲಿ ನಿಖಿಲ್ ಪ್ರಶ್ನೆ ಅಲ್ಲ. ಎಲ್ಲವೂ ನಿಮ್ಮ ಕೈಯಲ್ಲಿದೆ. ಕೈ ಜೋಡಿಸಿ ನಿಮ್ಮ ಪಾದಗಳಿಗೆ ಶಿರಸಾವಹಿಸಿ ಬೇಡಿಕೊಳ್ತಿದ್ದೇನೆ. ಒಂದೇ ಒಂದು ಅವಕಾಶ ಕೊಡಿ. ದೇವೇಗೌಡರು, ಕುಮಾರಣ್ಣ ಅವ್ರು ಕೆಲಸ ಮಾಡಿದ್ದಾರೆ. ನನ್ನ ಕೊನೆ ಉಸಿರಿರೋವರೆಗೂ ನಿಮ್ಮ ಜೊತೆ ಇರ್ತೇನೆ. ಒಂದು ಅವಕಾಶ ಕೊಡಿ. ಈ ಜಿಲ್ಲೆಯಲ್ಲಿ ನಾವು ಹುಟ್ಟದೇ ಇರಬಹುದು. ಈ ಜಿಲ್ಲೆಗೆ ಹಲವಾರು ವರ್ಷದ ನಂಟಿದೆ ಎಂದರು.
ಕುಮಾರಸ್ವಾಮಿ ದೇವೇಗೌಡರು ಕಣ್ಣಲ್ಲಿ ನೀರಾಕ್ತಾರೆ ಮರಳಾಗಬೇಡಿ ಅಂತಾರೆ. ಅವ್ರು ಕಣ್ಣೀರಾಕೋದು ನನಗಾಗಿ ಅಲ್ಲ. ರೈತರ ಪರವಾಗಿ, ನಾಡಿನ ಜನರು ನೋವಿನಲ್ಲಿದ್ದಾಗ ಕಣ್ಣಲ್ಲಿ ನೀರಾಕಿದ್ದಾರೆ. ಅದನ್ನ ಹೊರತುಪಡಿಸಿ ಅವರು ನನಗಾಗಿ ಕಣ್ಣೀರು ಹಾಕಲಿಲ್ಲ. ನನಗೆ ಆತ್ಮವಿಶ್ವಾಸ ತುಂಬಿ ದೇವೇಗೌಡ್ರು ಕಳುಹಿಸಿದ್ದಾರೆ. ನಿಮ್ಮ ಸಹಕಾರ ಇರಲಿ ಎಂದು ಕೇಳಿಕೊಂಡರು.
ಚುನಾವಣೆಯಲ್ಲಿ ನಿಲ್ಲಬೇಕು ಅಂತಾ ಕೇಳಿದ್ರು. ಆಗ ಕುಮಾರಣ್ಣ, ಮೊದಲು ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ರಾಷ್ಟ್ರೀಯ ನಾಯಕರ ಜೊತೆ ಹೋಗಿ ಮಾತಾಡೋಣ ಅಂದಿದ್ರು. ಅದಾದ ನಂತರ ಬೆಳವಣಿಗೆ ನೀವೆ ನೋಡಿದ್ದೀರಿ. ಬೆಂಗಳೂರು ಖಾಸಗಿ ಹೋಟೆಲ್‌ನಲ್ಲಿ ಅವರ ಜೊತೆ ಚರ್ಚೆ ಮಾಡಿದ್ವಿ. ಜೆಡಿಎಸ್ ಸಾಂಪ್ರದಾಯಿಕ ಮತಗಳಿವೆ, ಜೆಡಿಎಸ್‌ನಿಂದ ನಿಂತ್ಕೊಳ್ಳಿ ಅಂತಾ ನಮ್ಮ ನಾಯಕರು ಹೇಳಿದ್ರು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇದ್ರೂ ನಮ್ಮ ನಾಯಕರು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಅಂತಾ ಕೇಳಿದ್ರು. ಆದಾದ ಮೇಲೆ ಏನೆಲ್ಲ ಮಾತಾಡಿದ್ರು ನೋಡಿದ್ದೀರಿ. ಏನೇ ನೋವಿದ್ರು ಸಹಿಸ್ಕೊಂಡ್ವಿ. ತರಾತರಿಯಲ್ಲಿ ರಾಜೀನಾಮೆ ಕೊಟ್ಟು ಹೋಗಿ ಕಾಂಗ್ರೆಸ್ ಸೇರಿಕೊಂಡರು ಎಂದರು.