ರಾಮನಗರ, ಜು. ೧೫: ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆ, ಗರ್ಭಿಣಿ ತಪಾಸಣೆ, ಮಕ್ಕಳ ಲಸಿಕಾ ಕಾರ್ಯಕ್ರಮ, ಕುಟುಂಬ ಕಲ್ಯಾಣ ಯೋಜನೆ, ಸಾಂಕ್ರಾಮಿಕ ರೋಗಗಳಾದ ಕ್ಷಯ, ಕುಷ್ಠ, ಮಲೇರಿಯಾ, ಡೆಂಗಿ, ಚಿಕುನ್ ಗುನ್ಯ ರೋಗಗಳು ಮತ್ತು ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ ಇನ್ನಿತರೇ ರೋಗಗಳನ್ನು ಪತ್ತೆಮಾಡಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಹಾಗೂ ಹಾವು ಕಡಿತ, ನಾಯಿ ಕಡಿತ ಸಂದರ್ಭಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು. ಈ ಎಲ್ಲಾ ಸೇವಾ ಸೌಲಭ್ಯಗಳನ್ನು ರಾಷ್ಟಿಯ ಆರೋಗ್ಯ ಅಭಿಯಾನದಡಿಯಲ್ಲಿ ನೀಡಲಾಗುತ್ತಿದ್ದು ಸಾರ್ವಜನಿಕರು ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವಾ-ಸೌಲಭ್ಯ ಬಳಸಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್ ಅವರು ಮಾತನಾಡಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚನ್ನಪಟ್ಟಣ ತಾಲ್ಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರ ತಿಮ್ಮಸಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಆಸ್ಪತ್ರೆಯ ಆವರಣದಲ್ಲಿ ರಾಷ್ಟಿಯ ಆರೋಗ್ಯ ಕಾರ್ಯಕ್ರಮಗಳು / ಯೋಜನೆಗಳು / ಸೇವಾ ಸೌಲಭ್ಯಗಳ ಕುರಿತು ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವೈದ್ಯಾಧಿಕಾರಿ ಡಾ. ಫೌಜಿಯಾ ಅವರು ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಲೇರಿಯ ನಿಯಂತ್ರಿಸಲು ಎಲ್ಲಾ ಜ್ವರದ ಪ್ರಕರಣಗಳಿಗೆ ರಕ್ತ ಲೇಪನ ಸಂಗ್ರಹ ಮಾಡಲಾಗುತ್ತಿದೆ. ಜುಲೈ -೧೭ ರಿಂದ ಆಗಸ್ಟ್-೨ ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಮ್ಮಿಕೊಳ್ಳಲಾಗುತ್ತಿದ್ದು ಆಶಾ ಕಾರ್ಯಕರ್ತೆಯರು ಸಮೀಕ್ಷೆ ಕಾರ್ಯಮಾಡುವ ವೇಳೆ ಸಹಕರಿಸುವಂತೆ ಸಲಹೆ ನೀಡಿದರು. ೨ ವಾರಕ್ಕೂ ಹೆಚ್ಚು ಕೆಮ್ಮು, ಸಂಜೆಯವೇಳೆ ಜ್ವರ, ಬೆವರುವಿಕೆ, ಹಸಿವಾಗದೆ ಇರುವುದು, ಇಂತಹ ಲಕ್ಷಣಗಳಿರುವವರಿಗೆ ಕ್ಷಯ ರೋಗ ನಿಯಂತ್ರಿಸುವ ಸಲುವಾಗಿ, ಕಫ ಪರೀಕ್ಷೆ, ಪ್ರತಿ ಬುಧವಾರ ಗರ್ಭಿಣಿ ಪರೀಕ್ಷೆ, ಗುರುವಾರ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಪ್ರತಿ ತಂಗಳು ೯ನೇ ತಾರೀಖಿನಂದು ಗಂಡಾ0ತರ ಗರ್ಭಿಣಿಯರ ಆರೋಗ್ಯ ತಪಾಸಣೆ ಇತ್ಯಾಧಿ ಸೇವೆಗಳನ್ನು ನೀಡಲಾಗುತ್ತಿದ್ದು ಸಾರ್ವಜನಿಕರು ಪ್ರಾರಂಭಿಕ ಹಂತದಲ್ಲಿಯೇ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಫರಾನಭಾನು, ಫಾರ್ಮಸಿ ಅಧಿಕಾರಿ ತಾರಾಕೀರ್ತಿ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಹಾಜರಿದ್ದರು.