Monday, April 21, 2025
Google search engine

Homeರಾಜ್ಯಸ್ವಚ್ಛ ದೀಪಾವಳಿ, ಸ್ವಸ್ಥ ದೀಪಾವಳಿ ಜಾಗೃತಿ ಅಭಿಯಾನ: ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆಗೆ ಮನವಿ

ಸ್ವಚ್ಛ ದೀಪಾವಳಿ, ಸ್ವಸ್ಥ ದೀಪಾವಳಿ ಜಾಗೃತಿ ಅಭಿಯಾನ: ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆಗೆ ಮನವಿ

ಮಡಿಕೇರಿ : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಎನ್‍ಎಸ್‍ಎಸ್ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇಕೋ ಕ್ಲಬ್, ಎನ್.ಎಸ್.ಎಸ್.ಘಟಕಗಳ ಸಹಯೋಗದೊಂದಿಗೆ ನಮ್ಮ ನಡೆ ಹಸಿರೆಡೆಗೆ: ಗೋ ಗ್ರೀನ್ ಅಭಿಯಾನ: 2024 ದಡಿ ಸ್ವಚ್ಛ ದೀಪಾವಳಿ, ಸ್ವಸ್ಥ ದೀಪಾವಳಿ-2024 ರತ್ತ ನಮ್ಮ ಹೆಜ್ಜೆ” ಎಂಬ ಪರಿಸರ ಜಾಗೃತಿ ಅಭಿಯಾನ ನಡೆಯಿತು.

ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಲಿನ್ಯಕಾರಿ ಪಟಾಕಿ ಸಿಡಿಸುವುದನ್ನು ಬಿಟ್ಟು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವುದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.

ಹಸಿರು ದೀಪಾವಳಿ ಆಚರಣೆ ಕುರಿತ ಮಾಹಿತಿಯುಳ್ಳ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ರಂಗಧಾಮಪ್ಪ, ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಕುರಿತು ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರಾರ್ಥನಾ ಸಭೆಯ ವೇಳೆ ಮಾಲಿನ್ಯಕಾರಕ ಪಟಾಕಿಗಳನ್ನು ಸಿಡಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತೆ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಶಾಲೆಗಳಲ್ಲಿ ಇಕೋ ಕ್ಲಬ್‍ಗಳ ಮೂಲಕವೂ ಜಾಗೃತಿ ಮೂಡಿಸಬೇಕು ಎಂದು ಸಿ.ರಂಗಧಾಮಪ್ಪ ಅವರು ಸಲಹೆ ಮಾಡಿದರು.

ಕೊಡಗಿನ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರಾರ್ಥನಾ ಸಭೆಯ ವೇಳೆ ಮಾಲಿನ್ಯಕಾರಕ ಪಟಾಕಿಗಳನ್ನು ಸಿಡಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತೆ ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸುತ್ತೋಲೆ ಹೊರಡಿಸಿದೆ. ಶಾಲೆಗಳಲ್ಲಿ ಇಕೋಕ್ಲಬ್, ಎನ್.ಎಸ್.ಎಸ್., ಎನ್.ಸಿ.ಸಿ. ಘಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮಾಲಿನ್ಯಕಾರಿ ಪಟಾಕಿ ಸಿಡಿಸುವುದನ್ನು ಬಿಟ್ಟು ಹಸಿರು ಪಟಾಕಿ ಮಾತ್ರ ಬಳಸಲು ತಿಳಿಸಲಾಗಿದೆ ಎಂದರು.

ದೀಪಾವಳಿಯು ಬೆಳಕು ಮತ್ತು ಸಂಸ್ಕøತಿ ಹಾಗೂ ಸಂತೋಷದ ಹಬ್ಬವಾಗಿದೆ. ಇದು ನಮ್ಮ ಸಂಸ್ಕ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿರುವ ಆಚರಣೆಯಾಗಿದೆ ಎಂದು ಡಿಡಿಪಿಐ ರಂಗಧಾಮಪ್ಪ ಹೇಳಿದರು.

ಹಣತೆ(ಮಣ್ಣಿನ ದೀಪ) ಬೆಳಗಿಸಿ ಹಸಿರು ದೀಪಾವಳಿ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಲಿನ್ಯಕಾರಿ ಪಟಾಕಿ ಸಿಡಿಸುವುದನ್ನು ತ್ಯಜಿಸಿ ಪರಿಸರ ಸಂರಕ್ಷಣೆಗಾಗಿ ದೀಪ ಬೆಳಗಿಸಿ ಮಾಲಿನ್ಯ ತಡೆಗಟ್ಟಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ದೀಪಾವಳಿ ಹಬ್ಬದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸರ್ಕಾರ ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಸರ್ಕಾರ ಆದೇಶಿಸಲಾಗಿದೆ.. ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ತಗ್ಗಿಸಿ. ಪಟಾಕಿ ಸಿಡಿತದಿಂದ ಸಂಭವಿಸುವ ಅವಘಡಗಳನ್ನು ತಡೆಗಟ್ಟುವ ದಿಸೆಯಲ್ಲಿ ನಾವೆಲ್ಲರೂ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆಗೆ ವಿಶೇಷ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಹಸಿರು ದೀಪಾವಳಿ ಆಚರಣೆಯ ಮಹತ್ವದ ಕುರಿತು ಮಾಹಿತಿ ನೀಡಿದ ಹಸಿರು ದೀಪಾವಳಿ ಆಚರಣೆಯ ಸಂಘಟಕರೂ ಆದ ಕೊಡಗು ಜಿಲ್ಲಾ ಪರಿಸರ ಜಾಗೃತಿ ಅಭಿಯಾನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಮಾಲಿನ್ಯಕಾರಕ ಪಟಾಕಿಗಳನ್ನು ಸಿಡಿಸುವುದರಿಂದ ಶಬ್ದ, ವಾಯು ಮತ್ತು ಜಲ ಮಾಲಿನ್ಯ ಮಾತ್ರವಲ್ಲದೆ ಮಣ್ಣಿನ ಮಾಲಿನ್ಯವೂ ಉಂಟಾಗುತ್ತದೆ ಮತ್ತು ಮಾನವರು, ಪ್ರಾಣಿಗಳು ಮತ್ತು ಪಕ್ಷಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಇದರಿಂದಾಗಿ ಪರಿಸರ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. 125 ಡೆಸಿಬಲ್ ಗಿಂತ ಕಡಿಮೆ ಶಬ್ದ ಉಂಟು ಮಾಡುವ ಪಟಾಕಿಗಳನ್ನು ಮಾತ್ರ ಸಿಡಿಸಲು ಸರ್ಕಾರ ಅನುಮತಿ ನೀಡಿದೆ ಎಂದರು.

ಕೊಡಗಿನಲ್ಲಿ ಕಳೆದ 14 ವರ್ಷಗಳಿಂದ ಪರಿಸರ ಸ್ನೇಹಿ ದೀಪಾವಳಿ ಆಚರಣೆಯ ಮಹತ್ವದ ಕುರಿತು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಪಟಾಕಿಗಳನ್ನು ಸಿಡಿಸುತ್ತಿರುವುದು ಕ್ಷೀಣಿಸುತ್ತಿರುವುದು ಕಂಡುಬಂದಿದೆ ಎಂದರು.

ಹಸಿರು ದೀಪಾವಳಿ ಆಚರಣೆ ಕುರಿತ ಪ್ರತಿಜ್ಞಾ ವಿಧಿ ಬೋಧಿಸಿದ ಮಡಿಕೇರಿ ಬಿಇಒ ಬಿ.ಸಿ.ದೊಡ್ಡೇಗೌಡ ಮಾತನಾಡಿ, ವಿದ್ಯಾರ್ಥಿಗಳು ಸ್ವಚ್ಛ ಹಾಗೂ ಸ್ವಸ್ಥ ಪರಿಸರ ಸಂರಕ್ಷಣೆಗಾಗಿ ಪಟಾಕಿ ತ್ಯಜಿಸಿ ಹಣತೆ ಬೆಳಗಿಸಿ ಸ್ವಚ್ಛ ಹಾಗೂ ಸ್ವಸ್ಥ ಹಸಿರು ದೀಪಾವಳಿ ಆಚರಿಸುವ ಮೂಲಕ ಜನರಿಗೆ ಪರಿಸರ ಪ್ರಜ್ಞೆ ಮೂಡಿಸಬೇಕು ಎಂದರು.

ರಾಜ್ಯ ಸರ್ಕಾರದ ನಿರ್ದೇಶನದಂತೆ ಕೇವಲ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಸಿಡಿಸುವ ಮೂಲಕ ಬೆಳಕಿನ ಹಬ್ಬ ದೀಪಾವಳಿ ಆಚರಿಸಬೇಕು ಎಂದರು. ಹಸಿರು ದೀಪಾವಳಿ ಆಚರಣೆ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ ಪ್ರೌಢಶಾಲಾ ವಿದ್ಯಾರ್ಥಿನಿ ಎಂ.ಎನ್.ರಕ್ಷಿತಾ, ವಿದ್ಯಾರ್ಥಿಗಳೆಲ್ಲರೂ ಪಟಾಕಿ ತ್ಯಜಿಸಿ ಹಣತೆ ಬೆಳಗಿಸುವ ಮೂಲಕ ಹಸಿರು ದೀಪಾವಳಿ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು.

ಶಿಕ್ಷಣ ಇಲಾಖೆಯ ಡಿವೈಪಿಸಿ ಎಂ.ಕೃಷ್ಣಪ್ಪ, ಬಿಆರ್‍ಸಿ ಕೆ.ಪಿ.ಗುರುರಾಜ್, ಜಿಲ್ಲಾ ಸ್ಕೌಟ್ಸ್ ಸಂಸ್ಥೆಯ ಆಯುಕ್ತ ಜಿಮ್ಮಿ ಸಿಕ್ವೇರಾ, ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಸಹ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ತರಬೇತಿ ಆಯುಕ್ತ ಕೆ.ಯು.ರಂಜಿತ್, ಬುಲ್ ಬುಲ್ ವಿಭಾಗದ ಮುಖ್ಯಸ್ಥೆ ಡೈಸಿ, ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್, ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಕೆ.ವಿ.ಶಶಿಕಲಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎನ್.ಪಿ.ಕಾವೇರಿ, ಬಿಆರ್‍ಪಿ ಐ.ಜೆ.ಜನೆಟ್, ಶಿಕ್ಷಕರು, ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿ, ನಗರದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೆ.ಯು.ರಂಜಿತ್ ಕಾರ್ಯಕ್ರಮ ನಿರ್ವಹಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಗೀತೆ ಹಾಡಿದರು.

ಹಸಿರು ದೀಪಾವಳಿ ಘೋಷಣೆಗಳು: ವಿದ್ಯಾರ್ಥಿಗಳು ಹಸಿರು ದೀಪಾವಳಿ ಆಚರಣೆ ಕುರಿತಂತೆ ವಿವಿಧ ಪರಿಸರ ಘೋಷಣೆಗಳನ್ನು ಕೂಗಿ ಜನಜಾಗೃತಿ ಮೂಡಿಸಿದರು.

ವಿದ್ಯಾರ್ಥಿಗಳು ಹಣತೆ ಬೆಳಗಿಸಿ, ದೀಪಾವಳಿ ಆಚರಿಸಿ, ಪಟಾಕಿ ತ್ಯಜಿಸಿ-ಮಾಲಿನ್ಯ ತಡೆಯಿರಿ, ಹಸಿರು ದೀಪಾವಳಿ- ಆಚರಿಸೋಣ ಬನ್ನಿ, ಹಸಿರು ದೀಪಾವಳಿ-ಪರಿಸರ ದೀಪಾವಳಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಪ್ರಚುರಪಡಿಸಿದರು.

ಶಾಲೆಗಳಲ್ಲಿ ಹಸಿರು ದೀಪಾವಳಿ ಅಭಿಯಾನ: ಅಕ್ಟೋಬರ್ 28 ರಿಂದ 30 ರವರೆಗೆ ಕೊಡಗು ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಸಿರು ದೀಪಾವಳಿ ಆಚರಣೆ ಕುರಿತು ಮೂರು ದಿನಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular