ಯಳಂದೂರು: ತಾಲೂಕಿನ ಮಲಾರಪಾಳ್ಯ ಗ್ರಾಮದ ಬಳಿ ಇರುವ ಕರುವಿನಗುಡ್ಡದಲ್ಲಿ ಅಕ್ರಮವಾಗಿ ಭೂಮಿಯನ್ನು ಜೆಸಿಬಿ ಯಂತ್ರದ ಮೂಲಕ ಬಗೆದು ಮಣ್ಣನ್ನು ಲೂಟಿ ಮಾಡಿ, ಈ ಭೂಮಿಯನ್ನು ಹದಮಾಡಿರುವ ಮೂವರ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿ ದೂರು ಸಲ್ಲಿಸಿದರು.
ಮಾಂಬಳ್ಳಿ ಗ್ರಾಮದ ಮಹದೇವ, ಯರಿಯೂರಿನ ಸಿ. ರಾಜಣ್ಣ, ಆಲ್ಕೆರೆ ಅಗ್ರಹಾರ ಗ್ರಾಮದ ರಂಗಸ್ವಾಮಿ ಎಂಬುವರು ಇಲ್ಲಿನ ಸರ್ವೇ ನಂ. ೯೭ ರಲ್ಲಿರುವ ಸರ್ಕಾರಿ ಕರುವಿನ ಗುಡ್ಡದ ೪೯.೨೮ ಎಕರೆ ಜಮೀನಿನಲ್ಲಿ ೫ ಎಕರೆಗೂ ಹೆಚ್ಚು ಜಮೀನನ್ನು ಕಳೆದ ನಾಲ್ಕುದಿನಗಳ ಹಿಂದೆ ಜೆಸಿಬಿ ಯಂತ್ರಗಳ ಮೂಲಕ ಇಲ್ಲಿದ್ದ ಗುಡ್ಡವನ್ನು ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣನ್ನು ತೆಗೆದಿರುತ್ತಾರೆ. ಅಲ್ಲದೆ ಉಳುಮೆಯನ್ನು ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಕೆಲವರಿಗೆ ಇವರು ಬೆದರಿಕೆಯನ್ನು ಒಡ್ಡಿದ್ದಾರೆ. ಈ ಬಗ್ಗೆ ತಹಶೀಲ್ದಾರ್‌ರವರಿಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ.
ಈ ಗುಡ್ಡ ಆನಾದಿ ಕಾಲದಿಂದಲೂ ಗೌಡಹಳ್ಳಿ, ಮಲಾರಪಾಳ್ಯ, ಆಲ್ಕೆರೆ ಅಗ್ರಹಾರ ಸೇರಿದಂತೆ ಹಲವರು ಗ್ರಾಮದ ಹೈನುಗಾರರು, ಕುರಿ, ಮೇಕೆ ಸಾಕುದಾರರು ತಮ್ಮ ಜಾನುವಾರುಗಳನ್ನು ಮೇಯಿಸಲು ಇದನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಕಳೆದ ನಾಲ್ಕು ದಿನಗಳ ಹಿಂದೆ ಇಲ್ಲಿ ಕೆಲವು ವ್ಯಕ್ತಿಗಳು ಜೆಸಿಬಿ ಯಂತ್ರ ಹಾಗೂ ಟ್ರ್ಯಾಕ್ಟರ್ ಮೂಲಕ ಮಣ್ಣು ತುಂಬಿಸುತ್ತಿದ್ದರು. ಇದನ್ನು ರಾತ್ರೋರಾತ್ರಿ ಇಲ್ಲಿರುವ ಲಕ್ಷಾಂತರ ರೂ. ಮೌಲ್ಯದ ಮಣ್ಣನ್ನು ತುಂಬಿಸಲಾಗಿದೆ. ಅಲ್ಲದೆ ಭುಮಿಯನ್ನು ಹದ ಮಾಡಿ ಇಲ್ಲಿ ವ್ಯವಸಾಯ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ವಹಿಸಬೇಕು. ಇಲ್ಲಿಗೆ ಬಂದಿದ್ದ ಜೆಸಿಬಿ, ಟ್ರ್ಯಾಕ್ಟರ್ ಹಾಗೂ ಇತರೆ ಯಂತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಗ್ರಾಮಸ್ಥರು ಆರೋಪಿಸಿ ಈ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಮದೇಶ್ ಮಾತನಾಡಿ, ಈ ಗುಡ್ಡ ಸರ್ಕಾರಿ ಜಮೀನಾಗಿದೆ. ಇದನ್ನು ಯಾರೂ ಒತ್ತುವರಿಯಾಗಲಿ, ಇಲ್ಲಿನ ಮಣ್ಣನ್ನಾಗಲಿ ಕಬಳಿಸುವ ಹುನ್ನಾರವಾಗಲಿ ಮಾಡುವಂತಿಲ್ಲ. ಇಲ್ಲಿ ಮಣ್ಣನ್ನು ಸಮತಟ್ಟು ಮಾಡುತ್ತಿರುವ ಬಗ್ಗೆ ಕೆಲ ಗ್ರಾಮಸ್ಥರು ನಮಗೆ ಶುಕ್ರವಾರ ದೂರು ನೀಡಿದ್ದು ನಮ್ಮ ಗ್ರಾಮಲೆಕ್ಕಾಧಿಕಾರಿ ರಮ್ಯ ಭೇಟಿ ನೀಡಿ ಇವರಿಗೆ ಎಚ್ಚರಿಕೆ ನೀಡಿ ಮೇಲಾಧಿಕಾರಿಗಳಿಗೆ ಈಗಾಗಲೇ ವರದಿಯನ್ನು ನೀಡಿದ್ದಾರೆ. ಅಲ್ಲಿಂದೀಚೆ ಇಲ್ಲಿಗೆ ಯಾರೂ ಬಂದಿಲ್ಲ. ಇದು ಸರ್ಕಾರಿ ಆಸ್ತಿಯಾಗಿದ್ದು ಇಲ್ಲಿಗೆ ಅನಧಿಕೃತವಾಗಿ ಯಾರೂ ಪ್ರವೇಶಿಸುವಂತಿಲ್ಲ. ಗ್ರಾಮಸ್ಥರು ಮೂರು ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದು ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ವರದಿಯನ್ನು ನೀಡಿ ಇವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ರಜಸ್ವ ನಿರೀಕ್ಷಕ ರಮೇಶ್, ಗ್ರಾಮ ಲೆಕ್ಕಾಧಿಕಾರಿಗಳಾಧ ಶರತ್ ನಂದಾ, ಪ್ರವೀಣ್ ಗ್ರಾಮದ ಮುಖಂಡರಾದ ಆರ್. ಪುಟ್ಟಬಸವಯ್ಯ, ಶಿವನಂಜಯ್ಯ, ಶಿವರುದ್ರಪ್ಪ, ಎಸ್. ಪುಟ್ಟಸ್ವಾಮಿ, ಎನ್. ನಿಂಗರಾಜು ರೇಚಣ್ಣ ಎಸ್. ಸತೀಶ್, ಶಿವನಂಜ. ಆರ್. ಕುಮಾರ, ನಂಜಯ್ಯ, ಎನ್. ಮಲ್ಲು, ಬಂಗಾರನಾಯಕ, ಸೋಮಣ್ಣ, ಆರ್. ರಂಗಯ್ಯ ಆರ್. ರಾಜೇಶ್, ನೀಲಯ್ಯ, ಶಿವರುದ್ರಪ್ಪ, ಬಸವಣ್ಣ ಸತೀಶ್ ಸೇರಿದಂತೆ ಅನೇಕರು ಹಾಜರಿದ್ದರು.
