ಗುಂಡ್ಲುಪೇಟೆ: ತಾಲೂಕಿನ ಲಕ್ಕೂರು-ತಮಡಹಳ್ಳಿ ರಸ್ತೆ ಮಾರ್ಗದ ಸೇತುವೆಗೆ ಹೊಂದಿಕೊಂಡಂತೆ ಮಳೆ ನೀರು ಹರಿದ ಪರಿಣಾಮ ಕೊರಕಲು ಬಿದ್ದಿದೆ. ಇದರಿಂದ ಹಂತ ಹಂತವಾಗಿ ಸೇತುವ ಕುಸಿಯುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ತಾಲೂಕಿನ ಲಕ್ಕೂರು ಗ್ರಾಮದಿಂದ ತಮ್ಮಡಹಳ್ಳಿ ಕಡೆಗೆ ಹೋಗುವ ರಸ್ತೆ ಮಾರ್ಗದಲ್ಲಿ ಬರುವ ಸೇತುವೆಯಲ್ಲಿ ಕೊರಕಲು ಹೆಚ್ಚಿರುವ ಕಾರಣ ಮಣ್ಣು ಅಧಿಕ ಪ್ರಮಾಣದಲ್ಲಿ ಕುಸಿದಿದೆ. ಇದರ ಅರಿವಿದ್ದರೂ ಸಹ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನಹರಿಸದ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಲಕ್ಕೂರು ಗ್ರಾಮದ ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆಯು ಹರವೆ ಹೋಬಳಿ ಕೇಂದ್ರಕ್ಕೆ ತಲುಪಲಿದ್ದು, ಈ ಮಾರ್ಗವಾಗಿ ಪ್ರತಿದಿನ ಶಾಲಾ-ಕಾಲೇಜು ವಾಹನಗಳು, ಗೂಡ್ಸ್ ಆಟೋಗಳು ಹಣ್ಣು ತರಕಾರಿ ಹಾಗೂ ಚಂಡು ಮಲ್ಲಿಗೆ ಹೂವು ತುಂಬಿಕೊಂಡು ಸಂಚಾರ ಮಾಡುತ್ತಿವೆ. ಜೊತೆಗೆ ನೂರಾರು ಮಂದಿ ಕಾರು ಹಾಗೂ ಬೈಕ್ ಗಳು ಓಡಾಡುತ್ತಿವೆ. ಹಾಗೆಯೇ ರೈತರು ತಮ್ಮ ಜಮೀನುಗಳಿಗೆ ಈ ರಸ್ತೆ ಮೂಲಕವೇ ತೆರಳಬೇಕಿದೆ. ಆ ವೇಳೆ ಜಾನುವಾರುಗಳು ಹಾಗೂ ರೈತರು ಕಾಲು ಜಾರಿ ಬೀಳುವ ಸಂಭವವಿದೆ. ಆದ್ದರಿಂದ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೇತುವೆ ದುರಸ್ತಿ ಪಡಿಸುವಂತೆ ರೈತರು ಒತ್ತಾಯಿಸಿದ್ದಾರೆ.