ನವದೆಹಲಿ: ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಭಾರತ ಮತ್ತು ಚೀನಾ ಪಡೆಗಳ ಘರ್ಷಣೆ ಬಹುತೇಕ ಮುಗಿದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಪ್ರತಿಮೆ ಅನಾವರಣಗೊಳಿಸಿದರು. ಪ್ರತಿಕೂಲ ಹವಾಮಾನದಿಂದಾಗಿ ತವಾಂಗ್‌ಗೆ ರಾಜನಾಥ್ ಸಿಂಗ್ ಅವರು ತೆರಳಲು ಸಾಧ್ಯವಾಗದ ಹಿನ್ನೆಲೆ ಅಸ್ಸಾಂನ ತೇಜ್‌ಪುರದಲ್ಲಿರುವ ಸೇನಾ ಪ್ರಧಾನ ಕಚೇರಿಯಿಂದ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಪ್ರತಿಮೆ ಅನಾವರಣಗೊಳಿಸಿದ ಸಂದರ್ಭ ಮಾತನಾಡಿದ ಅವರು, ಎಲ್‌ಎಸಿ ಉದ್ದಕ್ಕೂ ಇರುವ ಕೆಲವು ಪ್ರದೇಶಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಭಾರತ ಮತ್ತು ಚೀನಾ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ಮಾತುಕತೆ ನಡೆಸುತ್ತಿವೆ. ಮಾತುಕತೆಯ ಪರಿಣಾಮವಾಗಿ ಎರಡೂ ದೇಶಗಳಲ್ಲೂ ಒಮ್ಮತ ಮೂಡಿದೆ. ಈ ಹೊಂದಾಣಿಕೆಯ ಆಧಾರದ ಮೇಲೆ ಗಸ್ತು ತಿರುಗುವ ಬಗ್ಗೆ ಇರುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಅದಕ್ಕಾಗಿ ನಾವು ಸ್ವಲ್ಪ ಸಮಯ ಕಾಯಬೇಕಾಗಿದೆ ಎಂದು ಹೇಳಿದ್ದಾರೆ.
೧೯೪೭ ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ ೫೬೦ ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಏಕೀಕರಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ಪ್ರತಿಮೆಯು ಜನರಿಗೆ ಏಕತೆಯ ಶಕ್ತಿ ಮತ್ತು ರಾಷ್ಟ್ರವನ್ನು ನಿರ್ಮಿಸಲು ಅಗತ್ಯವಾದ ಅಚಲವಾದ ಮನೋಭಾವವನ್ನು ನೆನಪಿಸುತ್ತದೆ ಎಂದರು.