ಚನ್ನಪಟ್ಟಣ-ರಾಮನಗರ: ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ವಾಮಮಾರ್ಗದಲ್ಲಿ ಉಪ ಚುನಾವಣೆ ಗೆಲ್ಲಲು ಸಂಚು ರೂಪಿಸಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ತಿಟ್ಟಮಾರನಹಳ್ಳಿ, ಕುಂತೂರು ದೊಡ್ಡಿ, ಚಿಕ್ಕನದೊಡ್ಡಿ, ಪಟಲು, ಕಳ್ಳಿ ಹೊಸೂರು, ಮೈಲನಾಯಕನಹಳ್ಳಿ ಇನ್ನಿತರೆ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದರು ಅವರು.
ಕಳೆದ ಚುನಾವಣೆಯಲ್ಲಿ ರಾಮನಗರ ಸೇರಿ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಕಳೆದ ಕಾಂಗ್ರೆಸ್ ಪಕ್ಷ ಗಿಫ್ಟ್ ಕೂಪನ್ ಗಳನ್ನು ಹಂಚಿ ಅಕ್ರಮ ನಡೆಸಿತ್ತು. ಉಪ ಚುನಾವಣೆಯಲ್ಲಿಯೂ ಅದೇ ರೀತಿಯ ಅಕ್ರಮ ನಡೆಸಲು ಹೊರಟಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಪಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕನಕಪುರ ಸೇರಿ ರಾಜ್ಯದ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಬೆಂಗಳೂರಿನ ಲುಲು ಮಾಲ್ ನಲ್ಲಿ ಖರೀದಿ ಮಾಡುವ ೩,೦೦೦,೫೦೦೦ ಮೌಲ್ಯದ ಗಿಫ್ಟ್ ಕೂಪನ್ ಹಂಚಲಾಯಿತು. ಚುನಾವಣೆ ಮುಗಿದ ಮೇಲೆ ಆ ಕೂಪನ್ ಗಳನ್ನು ಮಾಲ್ ನವರಿಗೆ ಕೊಟ್ಟರೆ ಅವರು ವಾಪಸ್ ಕಳಿಸಿದ್ದಾರೆ. ಇದೇ ಕುತಂತ್ರವನ್ನು ಕಾಂಗ್ರೆಸ್ ಪಕ್ಷ ಚನ್ನಪಟ್ಟಣದಲ್ಲಿಯೂ ಜಾರಿ ಮಾಡುತ್ತಿದೆ ಎಂದು ಅವರು ನೇರ ಆರೋಪ ಮಾಡಿದರು.
ಕಾಂಗ್ರೆಸ್ ಪಕ್ಷವು ವಾಮಮಾರ್ಗದಲ್ಲಿ ಚುನಾವಣೆಗಳನ್ನು ಗೆಲ್ಲುವ ಚಾಳಿ ಮಾಡಿಕೊಂಡಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿಯೂ ಕೂಪನ್ ಷಡ್ಯಂತ್ರ ಮಾಡಲು ಕಾಂಗ್ರೆಸ್ ಹೊರಟಿದೆ. ಇಂಥ ವಂಚನೆಯ ಕುತಂತ್ರಕ್ಕೆ ಯಾರೂ ಮರುಳಾಗಾಬಾರದು ಎಂದು ಕೇಂದ್ರ ಸಚಿವರು ಮನವಿ ಮಾಡಿದರು.