ಮಂಗಳೂರು (ದಕ್ಷಿಣ ಕನ್ನಡ): ಹೆಚ್ಚು ಜಿಎಸ್ ಟಿ ಸಂಗ್ರಹಿಸುವ ರಾಜ್ಯ ಕರ್ನಾಟಕವಾಗಿದ್ದರೂ ರಾಜ್ಯಕ್ಕೆ ಸಿಗಬೇಕಾದ ಪಾಲು ಸಿಗದ ಕಾರಣ ರಾಜ್ಯ ತೀವ್ರ ಆರ್ಥಿಕ ಅನ್ಯಾಯಕ್ಕೆ ಗುರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 59 ಸಾಧಕರು, 24 ಸಂಸ್ಥೆಗಳಿಗೆ ದ.ಕ. ಜಿಲ್ಲಾ ಪ್ರಶಸ್ತಿಯನ್ನು ಪ್ರದಾನ ಮಾಡಿ ರಾಜ್ಯೋತ್ಸವ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ, ಮೇಯರ್ ಮನೋಜ್ ಕೋಡಿಕ್ಕಲ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಪ್ರವೀಣ್ ಕುಮಾರ್ ಆಳ್ವ, ಎ.ಸಿ. ವಿನಯರಾಜ್, ನವೀನ್ ಡಿಸೋಜ, ಶಾಹುಲ್ ಹಮೀದ್, ಕಸಾದ ದ.ಕ. ಜಿಲ್ಲಾಧ್ಯಕ್ಷ ಎಂ.ಪಿ.ಶ್ರೀನಾಥ್, ಸದಾಶಿವ ಉಳ್ಳಾಲ್, ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್., ಸ್ಟ್ಯಾನಿ ಅಲ್ವಾರಿಸ್, ದೇವಿಪ್ರಸಾದ್ ಶೆಟ್ಟಿ, ಡಾ. ಶಿವಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.
ಬೆಳಗ್ಗೆ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದ ವರೆಗೆ ಭುವನೇಶ್ವರಿ ದೇವಿಯ ಭಾವಚಿತ್ರ ಹಾಗೂ ಕುವೆಂಪು ಅವರ ಮೂರ್ತಿಯ ಸ್ತಬ್ಧಚಿತ್ರದೊಂದಿಗೆ ಮೆರವಣಿಗೆ ನಡೆಯಿತು.

ಧ್ವಜಾರೋಹಣದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ತೆರೆದ ವಾಹನದಲ್ಲಿ ಕವಾಯತು ವೀಕ್ಷಿಸಿದರು. ಪಥ ಸಂಚಲದಲ್ಲಿ ಉತ್ತಮ ನಿರ್ವಹಣೆ ತೋರಿದ ಸಂತ ತೆರೆಸಾ ಶಾಲೆಯ ಆರ್ಎಸ್ಪಿ ಬಾಲಕ ಬಾಲಕಿಯರ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು.