ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ೨೦೦ ಕೋಟಿಗೂ ಅಧಿಕ ಅನುದಾನ ಮಂಜೂರಾಗಿದ್ದು ಪ್ರಮುಖ ಕಾಮಗಾರಿಗಳಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಂದ ಶೀಘ್ರದಲ್ಲಿಯೇ ಭೂಮಿಪೂಜೆ ಮಾಡಿಸುವುದಾಗಿ ಶಾಸಕ ಡಿ.ರವಿಶಂಕರ್ ಮಾಹಿತಿ ನೀಡಿದರು.
ತಾಲೂಕಿನ ಚರ್‍ನನಹಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕೆ.ಆರ್.ನಗರ ತಾಲೂಕಿನ ಕೆಸ್ತೂರು ಗೇಟ್ ಬಳಿ ಏತನೀರಾವರಿ ಯೋಜನೆಗೆ ೬೦ ಕೋಟಿ, ಹೆಬ್ಬಾಳು ಹೋಬಳಿಯ ಪ್ರಸಿದ್ದ ಯಾತ್ರಾ ಸ್ಥಳವಾದ ಕಪ್ಪಡಿ-ಗಂಧನಹಳ್ಳಿ ನಡುವೆ ಕಾವೇರಿ ಸಂಪರ್ಕ ಸೇತುವೆಗೆ ೨೫ ಕೋಟಿ, ಕೆ.ಆರ್.ನಗರ ಪಟ್ಟಣದ ಪುರಸಭೆ ವೃತ್ತದಿಂದ ಹೊಸಕೋಟೆ ಗ್ರಾಮದ ಸಂಪರ್ಕ ರಸ್ತೆಗೆ ೨೨ ಕೋಟಿ ಸೇರಿದಂತೆ ಇತರ ಕಾಮಗಾರಿಗಳಿಗೆ ಹಣ ಮಂಜೂರಾಗಿದೆ ಎಂದರು.
ಇದರೊಂದಿಗೆ ಅರ್ಕೇಶ್ವರ ದೇವಾಲಯದ ಬಳಿಯಿಂದ ಚರ್‍ನನಹಳ್ಳಿ ಸಂಪರ್ಕ ರಸ್ತೆಗೆ ೨.೫ ಕೋಟಿ, ಮಾಯಿಗೌಡನಹಳ್ಳಿ ಗ್ರಾಮದಿಂದ ಸೋಮನಹಳ್ಳಿ ಸಂಪರ್ಕ ರಸ್ತೆಗೆ ೫ ಕೋಟಿ, ಕೆ.ಆರ್.ನಗರ ರಾಮನಾಥಪುರ ಸಂಪರ್ಕ ರಸ್ತೆಯಿಂದ ಸಿದ್ದನಕೊಪ್ಪಲು ಗ್ರಾಮದ ರಸ್ತೆಗೆ ೧ ಕೋಟಿ, ಗಂಧನಹಳ್ಳಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ದಿಗೆ ೧.೫ ಕೋಟಿ ಮತ್ತು ಬಡಕನಕೊಪ್ಪಲು, ಮಿರ್ಲೆ, ದೊಡ್ಡಕೊಪ್ಪಲು ಗ್ರಾಮಗಳ ರಸ್ತೆ ಅಭಿವೃದ್ದಿಗೆ ತಲಾ ೧ ಕೋಟಿ ನೀಡಲಾಗಿದೆ ಎಂದು ನುಡಿದರು.
ಕೆ.ಆರ್.ನಗರ ಪಟ್ಟಣದಿಂದ ಚರ್‍ನನಹಳ್ಳಿ ಮೂಲಕ ಹೆಬ್ಬಾಳು, ಚುಂಚನಕಟ್ಟೆ, ಹೊಸೂರು, ಹನಸೋಗೆ ಮೂಲಕ ರಾಮನಾಥಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ದುರಸ್ಥಿ ಮತ್ತು ಅಗಲೀಕರಣಕ್ಕೆ ೨.೫ ಕೋಟಿ ಮಂಜೂರಾಗಿದ್ದು ಈ ಎಲ್ಲಾ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಆಯಾ ಇಲಾಖೆಗಳ ಸಚಿವರ ನೇತೃತ್ವದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಪ್ರಕಟಿಸಿದರು. ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಪಟ್ಟಣದ ಪುರಸಭೆ ಬಯಲು ರಂಗಮಂದಿರದ ಆವರಣದಲ್ಲಿ ಬೃಹತ್ ಸಭೆ ನಡೆಸಲಿದ್ದು ಶೀಘ್ರದಲ್ಲಿಯೇ ಸಭೆ ನಡೆಸಿ ದಿನಾಂಕ ನಿಗದಿಪಡಿಸುವುದಾಗಿ ಶಾಸಕರು ಹೇಳಿದರು.