ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿರಾಯಣ್ಣನವರ ದೇಶ ಪ್ರೇಮ ಮತ್ತು ದಿಟ್ಟತನ ಜಗತ್ತಿಗೆ ಮಾದರಿ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಚರ್‍ನನಹಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ೩೬ ವರ್ಷಗಳ ಕಾಲ ಬದುಕಿದ್ದ ಅವರ ಹೆಸರು
ಮತ್ತು ಕೀರ್ತಿ ಸೂರ್ಯ ಮತ್ತು ಚಂದ್ರ ಇರುವವರೆಗೂ ಶಾಶ್ವತ ಎಂದರು.
ಅವರ ಹೋರಾಟದ ಮನೋಭಾವನೆ ಮತ್ತು ಛಲವನ್ನು ನಾವೆಲ್ಲರೂ ಮೈಗೂಡಿಸಿಕೊಂಡು ದೇಶ ಪ್ರೇಮ ಬೆಳೆಸಿಕೊಂಡರೆ ಸಮಾನತೆ ಮತ್ತು ಶಕ್ತಿಯುತ ನಾಡು ಕಟ್ಟಲು ಸಾಧ್ಯವಾಗಲಿದ್ದು ಇದನ್ನು ಅರಿತು ಎಲ್ಲರೂ ಮುನ್ನಡೆಯಬೇಕು ಎಂದು ಕರೆ ನೀಡಿದ ಅವರು ಪ್ರತಿಯೊಬ್ಬ ಭಾರತೀಯನು ನೆಲ, ಜಲ ಮತ್ತು ಭಾಷೆಯ ವಿಚಾರ ಬಂದಾಗ ಒಂದಾಗಿ ಕೆಲಸ ಮಾಡಬೇಕೆಂದರು.
ರಾಯಣ್ಣನವರ ನೂತನ ಪ್ರತಿಮೆಯನ್ನು ವೇದಿಕೆ ಕಾಮಗಾರಿ ಮುಗಿಸಿ ಸಂಕ್ರಾಂತಿ ನಂತರ ಅನಾವರಣ ಮಾಡುವುದಾಗಿ ಪ್ರಕಟಿಸಿದ ಅವರು ಇಂತಹಾ ಮಹಾನ್ ಕ್ರಾಂತಿವೀರನ ಪುತ್ಥಳಿಯನ್ನು ಗ್ರಾಮದಲ್ಲಿ ಸ್ಥಾಪಿಸಿದ ನಂತರ ಎಲ್ಲರೂ ಅವರನ್ನು ಗೌರವಿಸಿ ನಿತ್ಯ ಪೂಜಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಂಚಿನ ಪುತ್ಥಳಿ ಮಾಡಿಸಿಕೊಡಲಿರುವ ನ್ಯೂ ಲೈಪ್ ಪೌಂಡೇಷನ್ ಅಧ್ಯಕ್ಷ ಮತ್ತು ಪ್ರಸಿದ್ದಿ ಹೆಚ್.ಆರ್.ಸೆಲ್ಯೂಷನ್ ವ್ಯವಸ್ಥಾಪಕ ನಿರ್ದೇಶಕ ಶಿವಮಾಧು ಅವರನ್ನು ಅಭಿನಂದಿಸಿದ ಶಾಸಕರು ಇಂತಹಾ ಉತ್ತಮ ಕೆಲಸ ಮಾಡುತ್ತಿರುವ ಇವರ ಸೇವಾ ಮನೋಭಾವನೆ ಸಮಾಜಕ್ಕೆ ಅನುಕರಣೀಯ ಎಂದು ಪ್ರಶಂಶಿಸಿದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಚಂದಗಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿಕುಂಟೇಗೌಡ, ಉಪಾಧ್ಯಕ್ಷ
ರಾಘವೇಂದ್ರ, ಸದಸ್ಯರಾದ ಮಣಿಯಮ್ಮ, ಸುರೇಶ್,ಪ್ರಕಾಶ್, ಮಲ್ಲೇಶ್, ವೆಂಕಟರಾಮು, ಮಾಜಿ ಸದಸ್ಯರಾದ ರವಿ, ಕೃಷ್ಣ, ಗ್ರಾಮದ ಮುಖಂಡರಾದ ಸಿ.ಟಿ.ಶಿವರಾಜು, ಸಿ.ಬಿ.ಶ್ರೀನಿವಾಸ್, ಕೃಷ್ಣೇಗೌಡ, ರಾಜೇಗೌಡ, ಸಿ.ಪಿ.ಆನಂದ್, ಸಿ.ಇ.ಉಮೇಶ್, ಮಾದಪ್ಪ, ಶಂಕರ್, ಸತೀಶ್, ಕರೀಗೌಡ, ಮಹದೇವ್ ಮತ್ತಿತರರು ಇದ್ದರು.