Saturday, April 19, 2025
Google search engine

Homeಸ್ಥಳೀಯಭವಿಷ್ಯದ ನವತಾರೆ ನಟ ಸುಪ್ರೀತ್: ಸಾಹಿತಿ ಬನ್ನೂರು ರಾಜು

ಭವಿಷ್ಯದ ನವತಾರೆ ನಟ ಸುಪ್ರೀತ್: ಸಾಹಿತಿ ಬನ್ನೂರು ರಾಜು


ಮೈಸೂರು :ಎಷ್ಟೇ ಅಪ್ರತಿಮ ಪ್ರತಿಭಾವಂತರಾಗಿದ್ದರೂ, ಅದೆಷ್ಟೇ ಸುರಸುಂದರರೇ ಆಗಿದ್ದರೂ ಸಿನಿಮಾ ಲೋಕದ ಕಲಾದೇವಿ ಅಷ್ಟು ಸುಲಭಕ್ಕೆ ಎಲ್ಲರಿಗೂ ಒಲಿಯುವುದಿಲ್ಲ ಇದಕ್ಕೆ ಅಪಾರ ಪರಿಶ್ರಮ, ಅವಿರತ ಪ್ರಯತ್ನ, ಇದೆಲ್ಲಕ್ಕಿಂತ ಹೆಚ್ಚಾಗಿ ಅದೃಷ್ಟವಿರಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಹಿಮಾಲಯ ಪ್ರತಿಷ್ಠಾನ ಮತ್ತು ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಚಿತ್ರನಟ ಸುಪ್ರೀತ್ ಸ್ನೇಹ ಬಳಗದ ಸಂಯುಕ್ತ ಆಶ್ರಯದಲ್ಲಿ ಅಗ್ರಹಾರದ ತ್ಯಾಗರಾಜ ರಸ್ತೆ ಯಲ್ಲಿರುವ ಅಕ್ಕನ ಬಳಗದ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ ಹುಲಿದುರ್ಗ ‘ ಚಲನಚಿತ್ರದ ಖ್ಯಾತಿಯ ಕನ್ನಡ ಚಿತ್ರರಂಗದ ಉದಯೋನ್ಮುಖ ನಾಯಕ ನಟ ಸುಪ್ರೀತ್ ಅವರ ಹುಟ್ಟು ಹಬ್ಬಸಂಭ್ರಮ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಲಾದೇವಿ ಎಲ್ಲರನ್ನೂ ಕೈಬೀಸಿ ಕರೆದರೂ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಳಾದ್ದರಿದ ಇಂತಹ ಆಯ್ಕೆಯ ಅದೃಷ್ಟ ಈಗಷ್ಟೇ ಚಿತ್ರರಂಗಕ್ಕೆ ಹೆಜ್ಜೆ ಇರಿಸಿ ನಡೆದಿರುವ ಉದಯೋನ್ಮುಖ ನಾಯಕನಟ ಸುಪ್ರೀತ್ ಅವರದಾಗಲೆಂದರು.
ಕಲಾವಿದರಿಗೆ ಅಭಿನಯದ ಜೊತೆಗೆ ಸಾಮಾಜಿಕ ಕಾಳಜಿಯೂ ಇರಬೇಕು. ಜನ್ಮ ನೀಡಿದ ನಮ್ಮನಾಡಿಗೆ ಏನಾದರೂ ಒಂದಿಷ್ಟು ಒಳಿತನ್ನು ಮಾಡಬೇಕೆಂಬ ಆಶಯದ ಬದ್ಧತೆ ಇರಬೇಕು. ಆಗ ಜನಾಭಿಮಾನದ ಪ್ರೀತಿಯಲ್ಲಿ ಸಿನಿಮಾರಂಗದ ಜೊತೆ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲೂ ಸಿನಿಮಾ ತಾರೆಯಂತೆಯೇ ಸಾಮಾಜಿಕ ತಾರೆಯೂ ಆಗಿ ಬೆಳೆದು ಹೊಳೆಯಬಹುದು. ಡಾ.ರಾಜಕುಮಾರ್, ಡಾ.ಅಂಬರೀಶ್, ಡಾ.ವಿಷ್ಣುವರ್ಧನ್, ಡಾ.ಪುನೀತ್ ರಾಜಕುಮಾರ್ ಇವರೆಲ್ಲರೂ ಜನರ ನಡುವೆ ಕಲಾವಿದರಾಗಿ ಬೆಳೆದದ್ದು ಹೀಗೆಯೇ. ಇಂಥಾ ಮಹನೀಯ ಕಲಾವಿದರೆಲ್ಲರನ್ನೂ ಸುಪ್ರೀತ್ ಅವರಂತಹ ಯುವ ನಟರು ಮಾದರಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವ ನಾಯಕ ನಟರಾಗಿರುವ ಸುಪ್ರೀತ್ ಅವರಲ್ಲಿ ಈ ಕಿರಿಯ ವಯಸ್ಸಿನಲ್ಲಿಯೇ ಹಿರಿದಾದ ಈ ಎಲ್ಲಾ ಗುಣಗಳು ಸಾಕಷ್ಟಿವೆ. ಜೊತೆಗೆ ಚಲನಚಿತ್ರ ಜಗತ್ತು ನಿರೀಕ್ಷಿಸುವ ಎಲ್ಲಾ ರೀತಿಯ ಅಭಿನಯ ಕಲಾ ಪ್ರತಿಭೆ ಇವರಲ್ಲಿ ಕರಗತವಾಗಿದೆ. ಹಾಗಾಗಿ ಭವಿಷ್ಯದಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲಿ ನವತಾರೆಯಾಗಿ ಬೆಳೆಯುವ ಎಲ್ಲಾ ಲಕ್ಷಣಗಳೂ ನಟ ಸುಪ್ರೀತ್ ಅವರಲ್ಲಿದ್ದು ಸಿನಿಮಾ ಲೋಕದ ಕಲಾದೇವಿಯನ್ನು ಸಂಪೂರ್ಣವಾಗಿ ಇವರು ಒಲಿಸಿಕೊಳ್ಳಬಲ್ಲರೆಂದು ಹೇಳಿ ಶುಭ ಹಾರೈಸಿದರು.
ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಹಿಮಾಲಯ ಪ್ರತಿಷ್ಠಾನ ಹಾಗೂ ಸುಪ್ರೀತ್ ಸ್ನೇಹ ಬಳಗ ಈ ಮೂರೂ ಸಂಸ್ಥೆಗಳ ವತಿಯಿಂದ ನಟ ಸುಪ್ರೀತ್ ನಟನೆಯ ಇಷ್ಟರಲ್ಲೇ ತೆರೆ ಕಾಣಲು ಸಿದ್ಧವಾಗಿರುವ ‘ರಾಘವೇಂದ್ರ’ ಚಿತ್ರದ ಹೆಸರಿನ ಬೃಹತ್ ಕೇಕನ್ನು ಕಟ್ ಮಾಡಿಸಿ ನಟ ಸುಪ್ರೀತ್ ಅವರನ್ನು ಅಷ್ಟೇ ಬೃಹತ್ ಹಾರ, ತುರಾಯಿ ಹಾಕಿ ಮೈಸೂರು ಪೇಟ ತೊಡಿಸಿ ಫಲ ತಾಂಬೂಲದೊಡನೆ ಸನ್ಮಾನಿಸಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಟ ಸುಪ್ರೀತ್ ಅವರು, ಕನ್ನಡ ಚಲನ ಚಿತ್ರರಂಗಕ್ಕೆ ನಮ್ಮ ಮೈಸೂರೇ ಮೂಲವಾಗಿದ್ದು ಬಹಳಷ್ಟು ಕಲಾವಿದರುಗಳನ್ನು, ನಿರ್ದೇಶಕರುಗಳನ್ನು, ತಂತ್ರಜ್ಞರನ್ನು ನಾಡಿಗೆ ನೀಡಿದ ಮತ್ತು ಅವರನ್ನು ಬೆಳೆಸಿದ ಕೀರ್ತಿ ಮೈಸೂರಿಗೆ ಸಲ್ಲುತ್ತದೆ. ಇಂತಹ ಸಾಂಸ್ಕೃತಿಕ ನಗರಿ ಮೈಸೂರು ಭಾಗದ ಕಲಾವಿದ ನಾನು ಎಂಬುದಕ್ಕೆ ಬಹಳ ಹೆಮ್ಮೆ ಇದೆ. ತಾವೆಲ್ಲರೂ ನನಗೆ ಆಶೀರ್ವಾದ, ಪ್ರೋತ್ಸಾಹ ನೀಡಿ ಕನ್ನಡ ಚಿತ್ರರಂಗದಲ್ಲಿ ನನ್ನನ್ನು ಬೆಳೆಸಬೇಕೆಂದು ವಿನಮ್ರವಾಗಿ ಕೋರಿಕೊಂಡ ಅವರು ನಾನು ‘ಹುಲಿದುರ್ಗ’ ಚಿತ್ರದ ಮೂಲಕ ಮೊದಲಿಗೆ ಚಿತ್ರರಂಗ ಪ್ರವೇಶಿಸಿದ್ದು ಈಗ ಎರಡನೇ ಚಿತ್ರವಾಗಿ ‘ರಾಘವೇಂದ್ರ’ ಚಿತ್ರದಲ್ಲಿ ನಟಿಸಿದ್ದು ಇದರ ಚಿತ್ರೀಕರಣ ಸಂಪೂರ್ಣ ಪೂರ್ಣಗೊಂಡಿದ್ದು ಇಷ್ಟರಲ್ಲೇ ರಾಜ್ಯಾದ್ಯಂತ ತೆರೆ ಕಾಣಲಿದ್ದು ತಾವೆಲ್ಲರೂ ಚಿತ್ರಮಂದಿರದಲ್ಲೇ ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. ಚಿತ್ರ ನಿರ್ಮಾಪಕ ರಾದ ವೆಂಕಟೇಶ್, ಉಮೇಶ್, ಸಿದ್ದರಾಜು, ಚಿತ್ರ ನಿರ್ದೇಶಕ ಯಶೋಧ್, ನಾಯಕಿ ನಟಿ ಪ್ರತೀಕ್ಷಾ, ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಹಾಸ್ಯ ನಟ ಚಂದ್ರಪ್ರಭ, ಕಲಾವಿದರಾದ ಮಂಜು ಗಾಳಿಪುರ, ಕುಮಾರ್ ಅರಸೇಗೌಡ, ವಿದ್ಯಾ ಹಾಗೂ ಬೇಬಿ ನಿಯತಿ ಕಾರ್ಯಕ್ರಮ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಸ್ತುತ ವರ್ಷದ ‘ಮಿಸ್ ಕರ್ನಾಟಕ’ ಪ್ರಶಸ್ತಿಗೆ ಭಾಜನರಾಗಿರುವ ಕುಮಾರಿ ತನಿಷ್ಕಾ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಹಾಗೆಯೇ ಸಮಾಜ ಸೇವಕ ವಿಕ್ರಂ ಅಯ್ಯಂಗಾರ್ ಅವರ ಸಮಾಜ ಸೇವಾ ಕಾರ್ಯಗಳನ್ನು ಗುರುತಿಸಿ ಅವರಿಗೆ ‘ಬಸವಭೂಷಣ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಶ್ರೀಬಸವರಾಜೇಂದ್ರ ಸ್ವಾಮಿ, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್. ಅನಂತ, ಅಕ್ಕನ ಬಳಗ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಗುಣಾವತಿ ಹಾಗೂ ‘ಹುಲಿದುರ್ಗ’ ಮತ್ತು ‘ರಾಘವೇಂದ್ರ’ ಎರಡೂ ಚಿತ್ರತಂಡಗಳ ಜಗದೀಶ್, ಶೇಖರ್, ಅಭಿಷೇಕ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular