Wednesday, April 16, 2025
Google search engine

Homeರಾಜ್ಯಸುದ್ದಿಜಾಲನ.10 ಮತ್ತು 11 ರಂದು ‘ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ’ ಸಂಚಾರ

ನ.10 ಮತ್ತು 11 ರಂದು ‘ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ’ ಸಂಚಾರ

ಕೊಡಗು ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಗೆ ಆರ್.ಐಶ್ವರ್ಯ ಸೂಚನೆ

ಮಡಿಕೇರಿ: ಅಖಿಲ ಭಾರತ 87 ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ‘ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ’ಯು ಇದೇ ನವೆಂಬರ್, 10 ಮತ್ತು 11 ರಂದು ಕೊಡಗು ಜಿಲ್ಲೆಯ ಐದು ತಾಲ್ಲೂಕಿನ ವಿವಿಧ ಸ್ಥಳಗಳಲ್ಲಿ ಸಂಚರಿಸಲಿದ್ದು, ಕನ್ನಡ ರಥಯಾತ್ರೆಯನ್ನು ಬರಮಾಡಿಕೊಳ್ಳುವ ಸಂಬಂಧ ಜಿಲ್ಲಾ, ತಾಲ್ಲೂಕು ಹಾಗೂ ಸ್ಥಳೀಯ ಸಂಸ್ಥೆಗಳು, ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಕೋರಿದ್ದಾರೆ.

ಕನ್ನಡ ಜ್ಯೋತಿ ರಥಯಾತ್ರೆ ಬರಮಾಡಿಕೊಳ್ಳುವ ಸಂಬಂಧ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಯು ನವೆಂಬರ್, 10 ರಂದು ಬೆಳಗ್ಗಿನ ವೇಳೆ ಸಂಪಾಜೆಗೆ ಆಗಮಿಸಲಿದ್ದು, ಎಲ್ಲರೂ ಸೇರಿ ಬರಮಾಡಿಕೊಳ್ಳಬೇಕಿದೆ. ನಂತರ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸಲಿದೆ. ನಂತರ ಪೊನ್ನಂಪೇಟೆಗೆ ತೆರಳಲಿದೆ. ಬಳಿಕ ನವೆಂಬರ್, 11 ರಂದು ಪೊನ್ನಂಪೇಟೆಯಿಂದ ಪಾಲಿಬೆಟ್ಟ-ಸಿದ್ದಾಪುರ ಮಾರ್ಗ ಕುಶಾಲನಗರ ತಲುಪಿ, ಕನ್ನಡ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬಳಿಕ ಸೋಮವಾರಪೇಟೆ ಮಾರ್ಗ ಹಾಸನಕ್ಕೆ ತೆರಳಲಿದ್ದು, ಈ ಸಂಬಂಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು, ಸ್ತ್ರೀಶಕ್ತಿ ಗುಂಪುಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೀಗೆ ಹಲವರು ಪಾಲ್ಗೊಂಡು ‘ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ’ಯನ್ನು ಸ್ವಾಗತಿಸಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಕೋರಿದರು.

ವಿವಿಧ ಸ್ಥಳಗಳಿಗೆ ಕನಿಷ್ಟ ಎರಡು ಕಲಾತಂಡಗಳನ್ನು ಆಹ್ವಾನಿಸಬೇಕು. ಪೂರ್ಣಕುಂಭ ಸ್ವಾಗತ, ಆರತಿ ಬೆಳಗುವುದು, ತಳಿರು ತೋರಣ ಕಟ್ಟುವುದು, ರಂಗೋಲಿ ಬಿಡಿಸುವುದು ಹೀಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಗೆ ಎಲ್ಲರೂ ಶ್ರಮಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಸಲಹೆ ನೀಡಿದರು.

ಇದೇ ನವೆಂಬರ್, 7 ಅಥವಾ 8 ರಂದು ಮತ್ತೊಂದು ವಿಡಿಯೋ ಸಂವಾದ ಮೂಲಕ ಪೂರ್ವ ಸಿದ್ಧತೆ ಬಗ್ಗೆ ಸಭೆ ನಡೆಸಲಾಗುವುದು. ತಮ್ಮ ತಮ್ಮ ಹಂತದಲ್ಲಿಯೂ ಸಹ ಅಗತ್ಯ ತಯಾರಿ ಬಗ್ಗೆ ಪೂರ್ವಭಾವಿ ಸಭೆ ನಡೆಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ತಹಶೀಲ್ದಾರರು, ತಾ.ಪಂ.ಇಒ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಮ್ಮ ಹಂತದಲ್ಲಿ ಸಭೆ ನಡೆಸಿ ಕಾರ್ಯಕ್ರಮ ಯಶಸ್ಸಿಗೆ ದುಡಿಯುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ನವೆಂಬರ್, 10 ರಂದು ಬೆಳಗ್ಗಿನ ವೇಳೆ ಕನ್ನಡ ರಥವು ಸಂಪಾಜೆಗೆ ಆಗಮಿಸಲಿದೆ. ಅಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಮಟ್ಟದ ಅಧಿಕಾರಿಗಳು ಬರಮಾಡಿಕೊಳ್ಳಬೇಕಿದೆ. ಅಂದು ಬೆಳಗ್ಗೆ 10.30 ಗಂಟೆಗೆ ಮಡಿಕೇರಿಗೆ ಆಗಮಿಸಲಿದ್ದು, ಪ್ರತಿಯೊಬ್ಬರೂ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸುವಂತೆ ಕೋರಿದರು.

ಮಡಿಕೇರಿಯಿಂದ ಮೂರ್ನಾಡು-ವಿರಾಜಪೇಟೆ-ಗೋಣಿಕೊಪ್ಪ-ಪೊನ್ನಂಪೇಟೆಗೆ ತೆರಳಿದೆ. ಈ ಸಂದರ್ಭದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿವೆ ಎಂದು ಅವರು ಮಾಹಿತಿ ನೀಡಿದರು.

ನವೆಂಬರ್, 11 ರಂದು ಕುಶಾಲನಗರದಲ್ಲಿ 5 ಸಹಸ್ರ ಜನರು ಕನ್ನಡ ಕಂಠ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಡಗೀತೆ ಸೇರಿದಂತೆ ವಿವಿಧ ಕನ್ನಡ ಗೀತೆಗಳನ್ನು ಹಾಡಲಾಗುತ್ತದೆ ಎಂದು ತಿಳಿಸಿದರು. ಆ ನಿಟ್ಟಿನಲ್ಲಿ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು ಪಾಲ್ಗೊಳ್ಳುವಂತೆ ಕಸಾಪ ಅಧ್ಯಕ್ಷರು ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ ಕನ್ನಡ ರಥಯಾತ್ರೆಯನ್ನು ಸಂಭ್ರಮದಿಂದ ಬರಮಾಡಿಕೊಂಡು ಯಶಸ್ವಿಯಾಗಿ ಆಚರಿಸಬೇಕಿದೆ. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ಇಒಗಳು, ಬಿಇಒಗಳು, ಶಿಶು ಕಲ್ಯಾಣ ಅಧಿಕಾರಿಗಳು, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಸ್ತ್ರೀಶಕ್ತಿ ಗುಂಪುಗಳು, ಅಂಗನವಾಡಿ ಕಾರ್ಯಕರ್ತರು ಕನ್ನಡ ರಥವನ್ನು ಬರಮಾಡಿಕೊಳ್ಳಬೇಕು. ಜಿಲ್ಲಾ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ, ರಥ ತೆರಳುವ ಮಾರ್ಗದಲ್ಲಿ ಗ್ರಾ.ಪಂ.ಮಟ್ಟದಲ್ಲಿಯೂ ಸಹ ಸ್ವಾಗತಿಸುವಂತಾಗಬೇಕು ಎಂದರು.

‘ರಾಜ್ಯದ ಗಡಿಭಾಗದ ಜಿಲ್ಲೆಯಾದ ಕೊಡಗಿನಲ್ಲಿ ಕನ್ನಡಮಯ ವಾತಾವರಣ ನಿರ್ಮಾಣ ಮಾಡಬೇಕು. ಒಳ್ಳೆಯ ಹೆಸರು ತರುವಂತಾಗಬೇಕು ಎಂದು ಟಿ.ಪಿ.ರಮೇಶ್ ಅವರು ಕೋರಿದರು.’

ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್ ಅವರು ಮಾತನಾಡಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಜೊತೆಗೆ ನಗರಸಭಾ ಸದಸ್ಯರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ಸುಗೊಳಿಸಬೇಕು ಎಂದು ಕೋರಿದರು.

ವಿವಿಧ ಅಕಾಡೆಮಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜನೆಗೆ ಅಗತ್ಯ ಸಹಕಾರಕ್ಕೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರೇವತಿ ರಮೇಶ್ ಅವರು ಮಾತನಾಡಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಶಾಲಾ ಶಿಕ್ಷಕರು ಕನಿಷ್ಠ 100 ಜನರಾದರೂ ಸೇರಿ ನಾಡಗೀತೆ, ಸೇರಿದಂತೆ ಕನ್ನಡ ಹಾಡುಗಳನ್ನು ಹಾಡುವಂತಾಗಬೇಕು ಎಂದು ಸಲಹೆ ಮಾಡಿದರು.

ಕಸಾಪ ಪದಾಧಿಕಾರಿಗಳಾದ ಕೆ.ಟಿ.ಬೇಬಿ ಮ್ಯಾಥ್ಯೂ, ಪರಮೇಶ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್(ಮಡಿಕೇರಿ), ರಾಜೇಶ್ ಪದ್ಮನಾಭ(ವಿರಾಜಪೇಟೆ), ಕೆ.ಎಸ್.ನಾಗೇಶ್(ಕುಶಾಲನಗರ), ವಿವಿಧ ಹೋಬಳಿ ಘಟಕದ ಅಧ್ಯಕ್ಷರಾದ ಹರಿಣಿ ವಿಜಯ(ಮೂರ್ನಾಡು), ಸುನಿಲ್ ಪತ್ರಾವೋ(ಭಾಗಮಂಡಲ), ಡಿವೈಎಸ್‍ಪಿ ಮಹೇಶ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಸಿ.ರಂಗಧಾಮಪ್ಪ, ತಹಶೀಲ್ದಾರರಾದ ಪ್ರವೀಣ್ ಕುಮಾರ್, ರಾಮಚಂದ್ರ, ಮೋಹನ್ ಕುಮಾರ್, ಶ್ರೀಧರ, ತಾ.ಪಂ.ಇಒಗಳಾದ ಶೇಖರ್, ಅಪ್ಪಣ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಅವರು ಹಲವು ಮಾಹಿತಿ ನೀಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ, ಮಣಜೂರು ಮಂಜುನಾಥ್ ಇದ್ದರು.

RELATED ARTICLES
- Advertisment -
Google search engine

Most Popular