ಕೊಣನೂರು: ರಾಮನಾಥಪುರ ಹೋಬಳಿಯ ಮಧುರನಹಳ್ಳಿಯಲ್ಲಿ ಕುಡಿಯಲು ಹಣ ಕೊಡದಿದ್ದಕ್ಕೆ ಮಗನಿಂದಲೇ ಹಲ್ಲೆಗೊಳಗಾಗಿದ್ದ ತಾಯಿ ಚಿಕ್ಕಮ್ಮ (೬೧) ಮೃತಪಟ್ಟಿದ್ದಾರೆ.
ಗ್ರಾಮದ ಈರಯ್ಯ ಎಂಬುವವರ ಮಗ ಭರತ್, ಅ.೨೯ರಂದು ರಾತ್ರಿ ಮದ್ಯಪಾನ ಮಾಡಿ ಬಂದು, ಕುಡಿಯಲು ಹಣ ಕೊಡುವಂತೆ ತಾಯಿ ಚಿಕ್ಕಮ್ಮ ಅವರನ್ನು ಪೀಡಿಸಿದ್ದಾನೆ. ಕೂಲಿ ಮಾಡಿ ಜೀವನ ಮಾಡಲು ಕಷ್ಟವಿರುವಾಗ, ಕುಡಿಯಲು ಹಣ ಎಲ್ಲಿಂದ ಕೊಡಲಿ ಎಂದು ಕೇಳಿದ್ದಕ್ಕೆ, ಕುಪಿತಗೊಂಡ ಆತ, ತಾಯಿಯ ಕಪಾಳಕ್ಕೆ ಹೊಡೆದು, ದೊಣ್ಣೆಯಿಂದ ಥಳಿಸಿದ್ದ. ಅಕ್ಕಪಕ್ಕದ ಮನೆಯವರು ಬಂದು ಸಮಾಧಾನಪಡಿಸಿದ್ದಾರೆ.
ಸುಸ್ತಾಗಿದ್ದ ಚಿಕ್ಕಮ್ಮ ಅವರನ್ನು ಅ. ೩೦ ರಂದು ಕೊಣನೂರು ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಹಾಸನದ ಸರ್ಕಾರಿ ಆಸ್ಪತ್ರೆ, ಜೀವಜ್ಯೋತಿ ಆಸ್ಪತ್ರೆಯಲ್ಲಿ ತೋರಿಸಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನ. ೫ರಂದು ಚಿಕ್ಕಮ್ಮ ಮೃತಪಟ್ಟಿದ್ದಾರೆ.
ತಾಯಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿ ಭರತ್‌ನನ್ನು ಕೆ.ಆರ್. ನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.