ಪುದುಚೇರಿ : ದೀಪಾವಳಿಗಾಗಿ ಪುದುಚೇರಿಯಲ್ಲಿರುವ ತಮ್ಮ ಕುಟುಂಬಸ್ಥರ ಮನೆಗೆ ಹೋಗಲು ಹೊರಟಿದ್ದ ಮುಂಬೈನ ೧೬ ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.
ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿ ಪುದುಚೇರಿಯ ಕಡಲತೀರದಲ್ಲಿ ಅತ್ಯಂತ ದುರ್ಬಲ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮೊದಲು ಆಟೋ ಚಾಲಕ ಅತ್ಯಾಚಾರ ಎಸಗಿದ್ದು ಬಳಿಕ ಪ್ರವಾಸಿಗರ ಗುಂಪೊಂದು ಅತ್ಯಾಚಾರ ಎಸಗಿದೆ ಎಂದು ಬಾಲಕಿ ಹೇಳಿದ್ದಾಳೆ.
ಪುದುಚೇರಿಯ ಕಡಲತೀರದಲ್ಲಿ ಪತ್ತೆಯಾದ ಬಾಲಕಿಯನ್ನು ಜಿಪ್ಮರ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ವೈದ್ಯಕೀಯ ವರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಮನೆಯಲ್ಲಿ ಸಣ್ಣ ಜಗಳ ನಡೆದು ಮನೆಯಿಂದ ಹೊರನಡೆದ ಬಾಲಕಿ ಪುದುಚೇರಿಗೆ ತನ್ನ ಕುಟುಂಬಸ್ಥರ ಮನೆಗೆ ದೀಪಾವಳಿ ಆಚರಿಸಲೆಂದು ಹೊರಟಿದ್ದಳು. ಆದರೆ ನಾಪತ್ತೆಯಾದ ಕಾರಣ ಆಕೆಯ ತಾಯಿ ಅಕ್ಟೋಬರ್ ೩೧ರಂದು ಪ್ರಕರಣ ದಾಖಲಿಸಿದ್ದರು. ಇದಾದ ಎರಡು ದಿನಗಳ ಬಳಿಕ ಬಾಲಕಿ ಪತ್ತೆಯಾಗಿದ್ದಾಳೆ.
ಪೊಲೀಸರು ತನಿಖೆ ನಡೆಸಿ ಸಿಸಿಟಿವಿ ಪರಿಶೀಲಿಸಿದಾಗ ಬಾಲಕಿ ಖಾಜಾ ಮೊಹಿದೀನ್ ಎಂಬ ವ್ಯಕ್ತಿಯ ಆಟೋ ರಿಕ್ಷಾವನ್ನು ಹತ್ತಿರುವುದು ಕಂಡುಬಂದಿದೆ. ಆಕೆ ಹೇಳಿದ ಸ್ಥಳಕ್ಕೆ ಕರೆದೊಯ್ಯುವ ಬದಲು ಆಟೋ ಚಾಲಕ ಅತಿಥಿ ಗೃಹವೊಂದಕ್ಕೆ ಕರೆದೊಯ್ದಿದ್ದಾನೆ. ಅಲ್ಲಿಂದ ಬಳಿಕ ಆತನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಬಾಲಕಿಯನ್ನು ಆರೋವಿಲ್ಲೆಯಲ್ಲಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದಾದ ಬಳಿಕ ಪ್ರವಾಸಿ ಟೆಕ್ಕಿಗಳಿದ್ದ ಕಾರನ್ನು ನಿಲ್ಲಿಸಿ ಬಾಲಕಿ ಲಿಫ್ಟ್ ಕೇಳಿದ್ದಾಳೆ. ಪ್ರವಾಸಿಗರು ಆಕಯನ್ನು ಮನೆಯೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿ ಎರಡು ದಿನಗಳ ಕಾಲ ಅದೇ ಕೊಠಡಿಯಲ್ಲಿ ಇರಿಸಿಕೊಂಡಿದ್ದಾರೆ. ಎರಡು ದಿನಗಳ ನಂತರ ಕ್ಯಾಬ್ ಬುಕ್ ಮಾಡಿ ಆಕೆಯನ್ನು ಪುದುಚೇರಿಗೆ ವಾಪಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಗ್ರ್ಯಾಂಡ್ ಬಜಾರ್ ಪೊಲೀಸರು ಆಂಧ್ರಪ್ರದೇಶದ ಓರ್ವ ಟೆಕ್ಕಿ, ಒಡಿಶಾದ ಇಬ್ಬರು ಟೆಕ್ಕಿಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.