ಚಾಮರಾಜನಗರ: ವಿದ್ಯಾರ್ಥಿಗಳು ವ್ಯಾಸಂಗ ಸಮಯದಲ್ಲಿ ಗುರಿ ಸಾಧನೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು.
ನಗರದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕøತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅಭಿವ್ಯಕ್ತಿ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯು 25 ವರ್ಷ ದಾಟಿ ಮುಂದೆ ಸಾಗುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಾಗಿದೆ. ಜಿಲ್ಲೆ ಶೈಕ್ಷಣಿಕವಾಗಿ ಅಭಿವೃದ್ದಿ ಸಾಧಿಸಲು ಮೂಲ ಸೌಕರ್ಯಗಳು ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ತಮ್ಮ ಗುರಿ ಸಾಧನೆಗೆ ಹೆಚ್ಚಿನ ಪರಿಶ್ರಮ ವಹಿಸಬೇಕು ಎಂದರು.ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕಾಲೇಜು, ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಐಟಿಐ ಡಿಪ್ಲೋಮಾ ಕಾಲೇಜು ಸ್ಥಾಪನೆಯಾಗಿದೆ. ಶೈಕ್ಷಣಿಕ ವರ್ಷದಿಂದ ಕಾನೂನು ಕಾಲೇಜು ಸ್ಥಾಪನೆಯ ಗುರಿ ಹೊಂದಲಾಗಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಗಮನಹರಿಸಿ ದೇಶದಲ್ಲಿ ಉತ್ತಮ ಪ್ರಜೆಗಳಾಗಿ ರೂಪಿತವಾಗಬೇಕು ಎಂದು ತಿಳಿಸಿದರು.ವಿದ್ಯಾರ್ಥಿಗಳು ಕಾಲೇಜಿನ ದಿನಗಳಲ್ಲಿ ಯಾವುದೇ ಗೊಂದಲಗಳಿಗೆ ತಲೆ ಹಾಕದೇ ನಿಮ್ಮ ಭವಿಷ್ಯದತ್ತ ಗಮನಹರಿಸಬೇಕು. ಪ್ರಸ್ತುತ ದಿನವು ಸ್ಪರ್ಧಾತ್ಮಕ ಯುಗವಾದರಿಂದ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದವರಿಗೆ ಮಾತ್ರ ಸರ್ಕಾರಿ ಕೆಲಸ ಲಭಿಸಲು ಸಾಧ್ಯ. ಕೈಗಾರಿಕಾ ಕ್ಷೇತ್ರದ ಅಭಿವೃದ್ದಿಗಾಗಿ ಬದನಗುಪ್ಪೆ ಕೈಗಾರಿಕಾ ವಲಯದಲ್ಲಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.ಚಾಮರಾಜನಗರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಜಿಲ್ಲೆಗಳಲ್ಲಿ ಚಾಮರಾಜನಗರವೂ ಸಹ ಒಂದಾಗಿದೆ. ಜಿಲ್ಲೆಯಲ್ಲಿ ಎಲ್ಲಾ ವಿಭಾಗದ ಕಾಲೇಜುಗಳು ಸ್ಥಾಪನೆಯಾಗಿದ್ದು, ವಿದ್ಯಾರ್ಥಿಗಳು ಹೆಚ್ಚು ಓದಿನ ಕಡೆ ಗಮನ ನೀಡಿದಾಗ ಮಾತ್ರ ವಿಶ್ವವಿದ್ಯಾಲಯಗಳಿಗೆ ಗೌರವ ದೊರಕಿದಂತಾಗುತ್ತದೆ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದ ಗುರಿಗಳನ್ನು ಹೊಂದಬೇಕು. ದೇಶದ ಉನ್ನತ ಸ್ಥಾನಗಳನ್ನು ಅಲಂಕರಿಸುವಂತಾಗಬೇಕು ಎಂದರು.
ಮುಖ್ಯ ಭಾಷಣ ಮಾಡಿದ ಕಾಲೇಜು ಶಿಕ್ಷಣ ಇಲಾಖೆಯ (ಮೈಸೂರು ವಿಭಾಗ) ವಿಶ್ರಾಂತ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರು ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ಮತ್ತು ವ್ಯಕ್ತಿತ್ವಗಳನ್ನು ವಿದ್ಯಾರ್ಥಿಗಳು ಅನುಸರಿಸುವಂತಾಗಬೇಕು. ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನು ಮೈಗೊಡಿಸಿಕೊಂಡು ಶಿಕ್ಷಣದಲ್ಲಿ ಪ್ರಗತಿ ಸಾಧಿಸಿ ಸಂಘಟಿತರಾಗಬೇಕು ಎಂದರು.