ರಾಮನಗರ: ಹಳ್ಳಿ-ಹಳ್ಳಿಗಳಲ್ಲಿ ನಿಖಿಲ್ ಗೆಲ್ಲಬೇಕು ಎಂದು ಜನ ಅಂದುಕೊಂಡಿದ್ದಾರೆ. ಇದು ನಿಖಿಲ್ ಭವಿಷ್ಯದ ಪ್ರಶ್ನೆ ಅಲ್ಲ, ಪ್ರಾದೇಶಿಕ ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದೆ. ಈ ಭೂಮಿ ಮೇಲೆ ನಿಮ್ಮ ಜೊತೆ ಯೋಗ್ಯನಾಗಿ ಕೆಲಸ ಮಾಡಲು ಮೂರೂವರೆ ವರ್ಷ ಅವಕಾಶ ಮಾಡಿಕೊಡಿ ಎಂದು ನಿಖಿಲ್ ಕುಮಾರಸ್ವಾಮಿ ಜನತೆಗೆ ಮನವಿ ಮಾಡಿದ್ದಾರೆ. ಇದೇ ವೇಳೆ ಪತ್ನಿ ರೇವತಿ ಜೊತೆಗೂಡಿ ನಿಖಿಲ್ ಮಂಡಿಯೂರಿ ಜನರಿಗೆ ನಮಸ್ಕರಿಸಿದ್ದಾರೆ.
ರಾಮನಗರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ನಾನು ಭಾವನಾತ್ಮಕ ಜೀವಿ, ಕ್ಷಮಿಸಿ ಇದರ ಹಿಂದೆ ಬೇರೆ ಉದ್ದೇಶ ಇಲ್ಲ. ಪ್ರತೀ ಹಳ್ಳಿಯಲ್ಲಿ ತಾಯಂದಿರು ಆಶೀರ್ವಾದ ಮಾಡಿದರು. ಪ್ರತೀ ದೇವಸ್ಥಾನಗಳ ದೇವರು ಆಶೀರ್ವಾದ ಮಾಡಿದ್ದಾರೆ. ನನಗೊಂದು ಅವಕಾಶ ಮಾಡಿಕೊಡುವ ಆತ್ಮಸ್ಥೈರ್ಯ ಇಲ್ಲಿನ ಜನ ಮೂಡಿಸಿದ್ದಾರೆ ಅದಕ್ಕಾಗಿ, ಇದನ್ನು ಕಂಡು ನಾನೆಂಥ ಪುಣ್ಯವಂತ ಅನ್ನಿಸಿತು. ಹಳ್ಳಿ ಹಳ್ಳಿಗಳಲ್ಲಿ ನಿಖಿಲ್ ಗೆಲ್ಲಬೇಕೆಂದು ಜನ ಅಂದುಕೊಂಡಿದ್ದಾರೆ. ಇದು ನಿಖಿಲ್ ಭವಿಷ್ಯದ ಪ್ರಶ್ನೆ ಅಲ್ಲ, ಪ್ರಾದೇಶಿಕ ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದೆ. ಮೂರೂವರೆ ವರ್ಷ ಅವಕಾಶ ಮಾಡಿಕೊಡಿ ನಾನು ಹೇಗೆ ಕೆಲಸ ಮಾಡುತ್ತೇನೆ ಎಂದು ನೀವೇ ನೋಡಿ ಎಂದು ವೇದಿಕೆ ಮೇಲೆ ಪತಿ-ಪತ್ನಿ ಜೊತೆಯಾಗಿ ಕೈಮುಗಿದು ಮತ ಯಾಚನೆ ಮಾಡಿದರು.
ದೇವೇಗೌಡರು ಮೊಮ್ಮಗನನ್ನು ಗೆಲ್ಲಿಸಲು ಆಂಬುಲೆನ್ಸ್‌ನಲ್ಲಿ ಬರುತ್ತಾರೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದರು. ಚನ್ನಪಟ್ಟಣದಲ್ಲಿ ನಿಖಿಲ್ ನಿಂತಿದ್ದಾನೆ ಎಂದು ದೇವೇಗೌಡರು ಬಂದು ಪ್ರಚಾರ ಮಾಡುತ್ತಿದ್ದಾರೆ ಅನ್ನುವ ಪ್ರಶ್ನೆ ಅಲ್ಲ. ಯಾವುದೇ ಸಾಮಾನ್ಯ ಕಾರ್ಯಕರ್ತ ನಿಂತಿದ್ದರೂ ದೇವೇಗೌಡರು ಪ್ರಚಾರಕ್ಕೆ ಬರುತ್ತಿದ್ದರು. ಈ ಜಿಲ್ಲೆಗೂ ದೇವೇಗೌಡರಿಗೂ ಬಹಳ ಹಳೆಯ ನಂಟಿದೆ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ಈಗ ನಾನು ನಿಲ್ಲುವುದಿಲ್ಲ, ಪಕ್ಷ ಕಟ್ಟೋದಿಕ್ಕೆ ಸ್ವಲ್ಪ ಸಮಯ ಕೊಡಿ ಎಂದು ಹೇಳಿದ್ದೆ. ನಂತರ ಏನೇನಾಯ್ತು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ವರದೇಗೌಡರು ನಮ್ಮ ಪಕ್ಷದಿಂದ ಶಾಸಕರಾಗಿ ಮನೆ ಮಗನಾಗಿ ಇಲ್ಲಿ ಕೆಲಸ ಮಾಡಿದವರು. ಇವರೆಲ್ಲ ನನಗೆ ಆದರ್ಶ ಹಾಗೂ ಸ್ಫೂರ್ತಿಯಾಗಿದ್ದಾರೆ. ಈ ಚುನಾವಣೆ ನನ್ನ ಬದುಕಿನ ಬಹುದೊಡ್ಡ ಅಗ್ನಿಪರೀಕ್ಷೆಯಾಗಿದೆ. ನೀನು ಇಲ್ಲಿ ಯಾವ ಪಾತ್ರ ಮಾಡ್ತೀಯಪ್ಪ ಎಂದು ಹಲವರು ಕೇಳುತ್ತಾರೆ. ಕುರುಕ್ಷೇತ್ರ ಸಿನೆಮಾದಲ್ಲಿ ನಾನು ಅಭಿಮನ್ಯು ಆಗಿದ್ದೆ. ನಾನು ಅರ್ಜುನನಾ ಅಥವಾ ಅಭಿಮನ್ಯುನಾ ಎಂದು ಚನ್ನಪಟ್ಟಣ ಜನರೇ ನಿರ್ಧಾರ ಮಾಡುತ್ತಾರೆ. ನನಗೆ ಗೊತ್ತಿರುವುದು ಮನುಷ್ಯತ್ವ ಮಾತ್ರ ಎಂದರು.
ಇದು ಕುಮಾರಣ್ಣ ಅವರ ಸ್ವಕ್ಷೇತ್ರ, ಅವರು ಸಂಸದರಾದ ಹಿನ್ನೆಲೆ ಕ್ಷೇತ್ರ ತೆರವಾಯಿತು. ಕಳೆದ ಎರಡು ಮೂರು ತಿಂಗಳ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ. ಈ ಉಪಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತವಾಗಿದೆ. ಕಳೆದೆರಡು ಸೋಲುಗಳಿಂದ ನನ್ನ ಎದೆ ಗುಂದಲಿಲ್ಲ. ಮಂಡ್ಯದಲ್ಲಿ 5.45 ಲಕ್ಷ ಜನ ಆಶೀರ್ವಾದ ಮಾಡಿದರು, ಆದರೆ ವಿಪರ್ಯಾಸ ಗೆಲ್ಲಲು ಆಗಲಿಲ್ಲ. ಅದಕ್ಕೆ ಅನೇಕ ಕಾರಣ ಇದ್ದವು ಈಗ ಅದನ್ನು ಮಾತನಾಡುವುದಿಲ್ಲ. ರಾಮನಗರದಲ್ಲೂ ಕೊನೆಯ ಕ್ಷಣದಲ್ಲಿ ನನ್ನ ಸ್ಪರ್ಧೆಯ ತೀರ್ಮಾನ ಆಯ್ತು. 76.5 ಸಾವಿರ ಜನ ನನಗೆ ಆಶೀರ್ವಾದ ಮಾಡಿದರು. ಅಲ್ಲಿನ ಸೋಲಿಗೆ ಕಾಂಗ್ರೆಸ್ ಗಿಫ್ಟ್ ಕೂಪನ್ ಕಾರ್ಡ್ ಕಾರಣವಾಗಿದೆ. ಯಾವ ಕೂಪನ್, ಯಾವ ಆಮಿಷಕ್ಕೂ ಚನ್ನಪಟ್ಟಣದ ಜನ ಬಲಿಯಾಗುವುದಿಲ್ಲ ಅನ್ನುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.