ರಾಯಚೂರು : ನಮ್ಮ ಹೋರಾಟ ಬಿಜೆಪಿ ವಿರುದ್ದವಲ್ಲ, ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಆಧಿಕಾರಕ್ಕೆ ತರುವ ಉದ್ದೇಶವಿದೆ. ಡಿಸೆಂಬರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುವ ನಿರೀಕ್ಷೆಯಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಾಯಕತ್ವ ಒಪ್ಪುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿ ಪಕ್ಷದ ವರಿಷ್ಠರಿಗೂ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಬದಲಾವಣೆಯಾಗುವ ವಿಶ್ವಾಸವಿದೆ. ಶಾಸಕ ಬಸನಗೌಡ ಯತ್ನಾಳ್, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಹಲವರು ರಾಜ್ಯಾದ್ಯಂತ ಪ್ರತಿ ಆರು ಜಿಲ್ಲೆಗಳಲ್ಲಿ ಒಂದು ತಂಡ ಪ್ರವಾಸ ಕೈಗೊಂಡು ಪಕ್ಷವನ್ನು ಮತ್ತಷ್ಟು ಸಂಘಟಿಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬಹುಮತದಿಂದ ತರುವ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.
ವಕ್ಫ್ ವಿಷಯದಲ್ಲಿ ಮುಖ್ಯಮಂತ್ರಿ ಹೇಳಿಕೆ ಕಣ್ಣೋರೆಸುವ ತಂತ್ರವಷ್ಟೆ. ಈಗಾಗಲೇ ಕಂದಾಯ ದಾಖಲೆಗಳಲ್ಲಿ ವಕ್ಫ್ ಎಂದು ನಮೂದಿಸಲಾಗಿದೆ. ಸಿಎಂ ಆದೇಶ ತಾತ್ಕಾಲಿಕವಷ್ಟೇ, ಶಾಶ್ವತ ಪರಿಹಾರವಲ್ಲ. ಕೇಂದ್ರ ಸರಕಾರ ವಕ್ಫ್ ಕಾಯ್ದೆಯ ಕುರಿತಂತೆ ಸಮಿತಿಯನ್ನು ರಚಿಸಿದೆ. ಕೇಂದ್ರ ಸರಕಾರ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಿದೆ. ರೈತರು, ಮಠ, ಮಂದಿರಗಳ ಆಸ್ತಿಯನ್ನು ವಕ್ಫ್ ಎಂದು ನಮೂದಿಸಿರುವುದನ್ನು ರದ್ದುಗೊಳಿಬೇಕು ಎಂದು ಆಗ್ರಹಿಸಿದರು.
ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ. ಪಕ್ಷದ ಮುಖಂಡರು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಹೇಳಿದರು.