ಚಾಮರಾಜನಗರ: ಭಾರತೀಯ ಸನಾತನ ಧರ್ಮದಲ್ಲಿ ತುಳಸಿ ಪೂಜೆಗೆ ಅಪಾರ ಗೌರವವಿದೆ. ಪ್ರತಿ ಮನೆಯಲ್ಲೂ ತುಳಸಿ ಗಿಡ ಪೂಜಿಸುವ, ಬೆಳೆಸುವ ಮೂಲಕ ಆರೋಗ್ಯ ಸಮೃದ್ಧಿ, ಶಾಂತಿ, ನೆಮ್ಮದಿ ಹೆಚ್ಚಲಿ ಎಂದು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ತುಳಸಿ ಹಬ್ಬದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ತುಳಸಿ ಪ್ರಕೃತಿಯ ಶ್ರೇಷ್ಠ ಕೊಡುಗೆಯಾಗಿದೆ. ತುಳಸಿ ಗಿಡದಿಂದ ಆರೋಗ್ಯ ಉನ್ನತಿಯಾಗಿ ಮಾನವ ದೈಹಿಕ ಮತ್ತು ಮಾನಸಿಕ ಆರೋಗ್ಯದಿಂದ ಇರಲು ಸಾಧ್ಯವಿದೆ. ಭಗವಂತ ನೀಡಿರುವ ಮಹಾ ಉಪಯುಕ್ತವಾದ ಪ್ರಕೃತಿಯನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಭಾರತೀಯ ಸನಾತನ ಧರ್ಮ ವಿಶೇಷವಾದ ಮೌಲ್ಯವನ್ನು ಗೌರವವನ್ನು ಭಕ್ತಿಯನ್ನು ಬೆಳೆಸಿದೆ. ಮಹಾಲಕ್ಷ್ಮಿ ಸಮೇತ ಮಹಾ ವಿಷ್ಣು ಪ್ರತಿ ಮನೆಯಲ್ಲೂ ನೆಲಸಲಿ. ತುಳಸಿ ಆರಾಧನೆ ಮೂಲಕ ಭಗವಂತನ ಪ್ರೀತಿಗೆ ಪಾತ್ರರಾಗಿ ಶಕ್ತಿಯುತವಾಗಿ ಸಮಾಜವನ್ನು ನಿರ್ಮಿಸೋಣ .ಪ್ರತಿ ಮನೆಗಳು ಆನಂದದ ಸಾಗರದಲ್ಲಿ ನೆಮ್ಮದಿಯಿಂದ ಬದುಕಲಿ. ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿ, ಧೈರ್ಯದಿಂದ ಬದುಕನ್ನು ಉನ್ನತಿಗೊಳಿಸಿಕೊಳ್ಳೋಣ. ಪ್ರತಿ ಪೂಜೆಯು ಮಾನವನ ಸಮಗ್ರ ಕಲ್ಯಾಣದ ದೃಷ್ಟಿಕೋನವಿದೆ.
ಪ್ರತಿ ಆಚರಣೆಗಳಿಗೂ ತನ್ನದೇ ಆದ ವಿಶೇಷ ಪ್ರಭಾವ ,ಶಕ್ತಿ ,ಅರ್ಥ, ವಿಶ್ಲೇಷಣೆ ,ಮೌಲ್ಯ ಇದೆ. ಮಾನವ ಪ್ರತಿ ಹಬ್ಬಗಳಲ್ಲೂ ಸಹಜವಾಗಿ ಭಾಗವಹಿಸಿ ತನ್ನ ಮೌಲ್ಯ ಕ್ಷಣವನ್ನು ಸಂತೋಷದಿಂದ ಅನುಭವಿಸುವ ಶಕ್ತಿಯನ್ನು ಭಾರತೀಯ ಪರಂಪರೆ ನೀಡಿದೆ . ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸೋಣ ಎಂದು ತಿಳಿಸಿದರು.
ಶಂಕರಪುರ ಹಿತರಕ್ಷಣಾ ಸಮಿತಿಯ ಶ್ರೀನಿವಾಸ್ ರವರು ಮಾತನಾಡಿ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಕಾರ್ಯಕ್ರಮ ಎಲ್ಲೆಡೆ ನಡೆಯುತ್ತಿದೆ . ದೀಪವು ಜ್ಞಾನದ ಸಂಕೇತವಾಗಿದೆ. ಪ್ರತಿ ಮನೆಯಲ್ಲೂ ಆಚರಿಸುವ ಮೂಲಕ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸೋಣ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಚಂದ್ರಕಲಾ ಮಾತನಾಡಿ ತುಳಸಿ, ಮಂಟಪಕ್ಕೆ ವಿಶೇಷವಾಗಿ ಸುಣ್ಣ ಬಣ್ಣ ಮೂಲಕ ದೀಪ ಹಚ್ಚಿ ಮಹಾನ್ ವ್ಯಕ್ತಿಯ ನೆರವೇರಿಸಿ ಪೂಜೆಯನ್ನು ಮಾಡುವ ಮೂಲಕ ಪ್ರತಿ ಮನೆಯಲ್ಲಿ ಶ್ರೀ ಲಕ್ಷ್ಮಿ ಸಮೇತ ಮಹಾ ವಿಷ್ಣು ನೆಲಸಲಿ ಎಂಬುದು ತುಳಸಿ ಹಬ್ಬದ ವಿಶೇಷವಾಗಿದೆ ಎಂದರು. ಝಾನ್ಸಿ ಮಕ್ಕಳ ಪರಿಷತ್ತಿನ ಗೌರವ ಅಧ್ಯಕ್ಷರಾದ ಕುಸುಮ ಋಗ್ವೇದಿ , ಶ್ರೀಮತಿ ಭಾಗ್ಯಲಕ್ಷ್ಮಿ, ಉಪಸ್ಥಿತರಿದ್ದರು.