ಮೈಸೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು “ಕರಿಯ’ ಎಂದು ಕರೆದು ವಿವಾದಕ್ಕೆ ಕಾರಣವಾಗಿರುವ ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ವಿಚಾರ ಕುರಿತು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಪರೋಕ್ಷ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಜಮೀರ್ ಹೇಳಿಕೆ ಪಕ್ಷಕ್ಕೆ ಹೊರೆಯಾಗಿದೆ ಎಂದು ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಬೇಕಾದರೆ ಪಕ್ಷದ ಶಿಸ್ತು ಪಾಲನಾ ಸಮಿತಿಗೆ ವರದಿ ಕೊಟ್ಟರೆ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಕ್ರಮ ಕೈಗೊಳ್ಳಬಹುದು.
ನಾನು ಈ ಹಿಂದೆ ಎಐಸಿಸಿ ಶಿಸ್ತು ಪಾಲನಾ ಸಮಿತಿ ಸದಸ್ಯನಾಗಿದ್ದೆ. ಆಗ ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆ ಕೊಡುವ ನಾಯಕರನ್ನು ಅವರು ಎಷ್ಟೇ ದೊಡ್ಡವರಿದ್ದರೂ ನೋಟಿಸ್ ಕೊಟ್ಟು ಕರೆಸುತ್ತಿದ್ದೆವು. ಅಗತ್ಯವಿದ್ದರೆ ಅಮಾನತು ಕೂಡ ಮಾಡುತ್ತಿದ್ದೆವು. ಈಗಲು ಕೆಪಿಸಿಸಿ ಅಧ್ಯಕ್ಷರು ಶಿಸ್ತು ಪಾಲನಾ ಸಮಿತಿ ಗಮನಕ್ಕೆ ಈ ವಿಚಾರ ತರಬಹುದು. ಜಮೀರ್ ಹೇಳಿಕೆಯಿಂದ ಚುನಾವಣೆಯಲ್ಲಿ ಸ್ವಲ್ಪ ಪರಿಣಾಮ ಬೀರುತ್ತಿದೆ ಎಂದು ಪಕ್ಷದ ನಾಯಕರೇ ಹೇಳಿದ್ದಾರೆ ಎಂದರು.