ಉಡುಪಿ : ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಪೀತಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದ. ಇದೀಗ ಮರಣೋತ್ತರ ಪರೀಕ್ಷೆ ಬಳಿಕ ಆತನ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಮೋಸ್ಟ ವಾಂಟೆಡ್ ವಿಕ್ರಂ ಗೌಡ ಅಂಡ್ ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕುಟುಂಬಸ್ಥರಿಗೆ ವಿಕ್ರಂ ಗೌಡನ ಮೃತ ದೇಹವನ್ನು ತೆಗೆದುಕೊಂಡು ಹೆಬ್ರಿಕೋಡ್ಲು ಗ್ರಾಮಕ್ಕೆ ಕುಟುಂಬಸ್ಥರು ತೆರಳಿದ್ದಾರೆ. ಮಧ್ಯಾಹ್ನ 2 ಗಂಟೆಗೆ ವಿಕ್ರಂ ಗೌಡನ ಅಂತ್ಯಸಂಸ್ಕಾರ ನೆರವೇರುವ ಸಾಧ್ಯತೆ ಇದೆ. ವಿಕ್ರಂ ಗೌಡನ ನಿವಾಸದ ಆವರಣದಲ್ಲಿಯೇ ಆತನ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಹೆಬ್ರಿ ಪರಿಸರದಲ್ಲಿ ಕಳೆದ ಕೆಲದಿನಗಳಿಂದ ನಕ್ಸಲ್ ಓಡಾಟ ವರದಿಯಾಗಿದ್ದು, ಎಎನ್ ಎಫ್ ತೀವ್ರ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು.ಸೋಮವಾರ ತಡ ಒಂದು ಗಂಟೆ ಸುಮಾರಿಗೆ 5 ಮಂದಿ ನಕ್ಸಲರ ತಂಡ ಪೀತ ಬೈಲು ಸಮೀಪ ರೇಷನ್ ಸಂಗ್ರಹಕ್ಕೆ ಬಂದಾಗ ಎಎನ್ ಎಫ್ ತಂಡ ಕಾರ್ಯಾಚರಣೆ ನಡೆಸಿದೆ.
ಈ ವೇಳೆ ದಾಳಿ-ಪ್ರತಿದಾಳಿ ನಡೆದಿದ್ದು, ಪೊಲೀಸರ ಗುಂಡೇಟಿಗೆ ವಿಕ್ರಂ ಗೌಡ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉಳಿದ ನಾಲ್ವರು ಕಾಡಿನ ಹಾದಿಯಲ್ಲಿ ಪರಾರಿಯಾಗಿದ್ದಾರೆ. ಎಎನ್ ಎಫ್ ಕೂಂಬಿಂಗ್ ಮುಂದುವರಿಸಿದ್ದು, ಇನ್ನುಳಿದವರಿಗಾಗಿ ಶೋಧ ನಡೆಸುತ್ತಿದೆಎಂದು ಎಎನ್‌ಎಫ್ ಮೂಲಗಳು ತಿಳಿಸಿವೆ.