ಮೈಸೂರು : ಸಿಸಿಬಿ ಹಾಗೂ ಸರಸ್ವತಿಪುರಂ ಠಾಣೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ನಡೆಸುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ ನಡೆಸಿ ಓರ್ವನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಂಟಿ ಕಾರ್ಯಾಚರಣೆಯಲ್ಲಿ ವಾಣಿಜ್ಯ ಹಾಗೂ ವಿವಿದ ಕಂಪನಿಯ ಗೃಹಬಳಕೆ ಸೇರಿದಂತೆ ೧೧೯ ಸಿಲಿಂಡರ್‌ಗಳನ್ನ ವಶಪಡಿಸಿಕೊಳ್ಳಲಾಗಿದೆ. ಮೈಸೂರಿನ ರಾಜರಾಜೇಶ್ವರಿ ನಗರ ಬೆಮಲ್ ಲೇಔಟ್ ೨ ನೇ ಹಂತದಲ್ಲಿರುವ ಸರ್ವೆ ನಂ ೨೪೧/೨ ರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ದಂಧೆಗೆ ಬ್ರೇಕ್ ಹಾಕಲಾಗಿದೆ.
ಬೋಗಾದಿ ನಿವಾಸಿ ಮುನಿವೇಲು(೩೫) ಬಂಧಿತ ಆರೋಪಿ. ರೀಫಿಲ್ಲಿಂಗ್‌ಗೆ ಬಳಸುತ್ತಿದ್ದ ೬ ರಾಡ್‌ಗಳು, ೨ ಮೋಟಾರ್ ಗಳು, ಒಂದು ಡಿಜಿಟಲ್ ತೂಕದ ಯಂತ್ರ, ಸಿಲಿಂಡರ್ ಗಳನ್ನ ಸಾಗಿಸಲು ಬಳಸುತ್ತಿದ್ದ ಎರಡು ವಾಹನ ವಶಪಡಿಸಿಕೊಳ್ಳಲಾಗಿದೆ.
ಸಿಸಿಬಿ ಠಾಣೆ ಉಪನಿರೀಕ್ಷಕರಾದ ರಾಜು ಕೊನರೇರಿ, ಆಹಾರ ನಿರೀಕ್ಷಕರಾದ ಶಶಿಧರ್ ನಾಯ್ಕ ರವರೊಂದಿಗೆ ಸರಸ್ವತಿಪುರಂ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಯಶಸ್ವಿಗೊಳಿಸಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.