ಮೈಸೂರು : ಅಕ್ರಮವಾಗಿ ಆಸ್ತಿ ಸಂಪಾದನೆ ಆರೋಪದಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಮತ್ತು ಮಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿರುವ ಕೃಷ್ಣವೇಣಿ ಅವರ ಮೈಸೂರು ಹಾಗೂ ಮಂಡ್ಯದ ಮನೆ ಮತ್ತು ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಮಹೇಶ್ ಅವರ ವಿಜಯನಗರ ೨ ನೇ ಹಂತದಲ್ಲಿರುವ ಮನೆ ಮತ್ತು ಗೋಕುಲಂನ ಮಂಜುನಾಥಪುರದಲ್ಲಿನ ನಿಗಮದ ಕಚೇರಿ ಮತ್ತು ಕೆಆರ್‌ಎಸ್‌ನಲ್ಲಿನ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಹೇಶ್ ಈ ಹಿಂದೆ ಮುಡಾದಲ್ಲಿ ಅಧೀಕ್ಷಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದು, ಆ ಅವಧಿಯಲ್ಲಿಯೂ ಲೋಕಾಯುಕ್ತ ದಾಳಿ ನಡೆದಿತ್ತು.
ಮಂಡ್ಯ ಜಿಲ್ಲೆಯ ಹಲಗೂರು ಸಮೀಪದ ಕೊನ್ನಾಪುರ ಗ್ರಾಮದ ಮಹೇಶ್ ಅವರ ಮನೆ ಮತ್ತು ದಳವಾಯಿ ಕೋಡಿಹಳ್ಳಿಯಲ್ಲಿರುವ ಸಂಬಂಧಿಕರಾದ ಕೃಷ್ಣಪ್ಪ ಅಲಿಯಾಸ್ ನಂಜುಂಡೇಗೌಡ ಅವರ ಮನೆ ಹಾಗೂ ಮಂಡ್ಯ ಗಡಿ ಭಾಗದಲ್ಲಿರುವ ಪೆಟ್ರೋಲ್ ಬಂಕ್ ಮೇಲೆ ಮಂಡ್ಯ ಲೋಕಾಯುಕ್ತ ಎಸ್.ಪಿ. ಸುರೇಶ್‌ಬಾಬು ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಬೆಳಿಗ್ಗೆಯಿಂದ ಸಂಜೆಯವರೆಗೂ ಆಸ್ತಿ ದಾಖಲೆಗಳ ಕಡತಗಳ ಪರಿಶೀಲನೆ ನಡೆಸಿದರು.
ಕೃಷ್ಣವೇಣಿ ಅವರ ಮೈಸೂರಿನ ಗೋಕುಲಂನಲ್ಲಿರುವ ಮನೆಯ ಮೇಲೂ ದಾಳಿ ನಡೆದಿದ್ದು, ಬೆಳಿಗ್ಗೆ ೭ ರಿಂದ ಸಂಜೆ ೬ ಗಂಟೆಯವರೆಗೂ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕೊನ್ನಾಪುರ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಅವರಿಗೆ ಸೇರಿದ ಮನೆಯಲ್ಲಿ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ನಡೆಸಿದರು