ನವದೆಹಲಿ: ದೇಶದಾದ್ಯಂತ ಹವಾಮಾನ ಬದಲಾಗಿದೆ. ಉತ್ತರ ಭಾರತದಲ್ಲಿ ಕೊರೆಯುವ ಚಳಿ ಹೆಚ್ಚಾಗಿದ್ದರೆ , ದಕ್ಷಿಣ ಭಾರತದಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಬಲವಾದ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.
ಗುಡ್ಡಗಾಡು ರಾಜ್ಯಗಳಲ್ಲಿ ಹಿಮಪಾತದಿಂದಾಗಿ ಚಳಿ ಹೆಚ್ಚಾಗಿದೆ. ನವೆಂಬರ್ 26ರವರೆಗೆ ಇದೇ ರೀತಿ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯ ಕಡಿಮೆಯಾಗಲಾರಂಭಿಸಿದ್ದು, ಚಳಿಯ ತೀವ್ರತೆ ಹೆಚ್ಚಾಗತೊಡಗಿದೆ. ಉತ್ತರ ಭಾರತದ ಇತರೆ ರಾಜ್ಯಗಳಲ್ಲಿ ಬೆಳಗ್ಗೆ ಮತ್ತು ಸಂಜೆ ದಟ್ಟವಾದ ಮಂಜು ಕವಿದಿದೆ. ಹಗಲು ಬಿಸಿಲಿನಿಂದ ಚಳಿಯಿಂದ ಉಪಶಮನವಿದೆ. ಸೈಕ್ಲೋನಿಕ್ ಚಂಡಮಾರುತವು ಮತ್ತೊಮ್ಮೆ ಕಡಲ ಪ್ರದೇಶಗಳನ್ನು ಅಪ್ಪಳಿಸಬಹುದು. ಇದರಿಂದಾಗಿ ಕರಾವಳಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬಲವಾದ ಗಾಳಿ, ಭಾರೀ ಮಳೆ ಹಾಗೂ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಪ್ರಕಾರ, ದಕ್ಷಿಣ ಅಂಡಮಾನ್ ಸಮುದ್ರದ ಪಕ್ಕದಲ್ಲಿರುವ ಸುಮಾತ್ರಾ ಕರಾವಳಿಯ ಸಮಭಾಜಕ ಹಿಂದೂ ಮಹಾಸಾಗರದಲ್ಲಿ ಸೈಕ್ಲೋನಿಕ್ ಪರಿಚಲನೆ ಇದೆ. ಇದರ ಪ್ರಭಾವದಿಂದ ಆಗ್ನೇಯ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗುವ ಸಾಧ್ಯತೆ ಇದ್ದು, ಇದು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸಿ ತೀವ್ರಗೊಳ್ಳುವ ಸಾಧ್ಯತೆ ಇದೆ. ಮುಂದಿನ 2 ದಿನಗಳಲ್ಲಿ, ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿ ಒತ್ತಡದ ಪ್ರದೇಶವು ರೂಪುಗೊಳ್ಳುತ್ತದೆ. ಇದರ ಪರಿಣಾಮದಿಂದ ಕೇರಳ, ತಮಿಳುನಾಡು, ಕರ್ನಾಟಕ ಆಂಧ್ರಪ್ರದೇಶ, ಪುದುಚೇರಿ, ಅಂಡಮಾನ್ ನಿಕೋಬಾರ್ ದ್ವೀಪಗಳು, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾದಲ್ಲಿ ನವೆಂಬರ್ 26 ರವರೆಗೆ ಮೋಡ ಮತ್ತು ಗುಡುಗು ಸಹಿತ ಮಳೆಯಾಗಲಿದೆ.
ಹವಾಮಾನ ಇಲಾಖೆ ಪ್ರಕಾರ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವೆಡೆ ಆಲಿಕಲ್ಲು ಮಳೆಯಾಗುವ ಸಾಧ್ಯತೆಯೂ ಇದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗುತ್ತಿದೆ. ಇದರ ಪರಿಣಾಮದಿಂದ ಗಂಟೆಗೆ 35 ಕಿಲೋಮೀಟರ್ ನಿಂದ 45 ಕಿಲೋಮೀಟರ್ ವೇಗದಲ್ಲಿ ಮತ್ತು ಗಂಟೆಗೆ 55 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.
ಮೀನುಗಾರರು ದಕ್ಷಿಣ ಕೇರಳ ಕರಾವಳಿ, ಲಕ್ಷದ್ವೀಪದ ದಕ್ಷಿಣ ಅಂಡಮಾನ್ ಸಮುದ್ರ, ಕೊಮೊರಿನ್ ಪ್ರದೇಶ ಮತ್ತು ಮನ್ನಾರ್ ಕೊಲ್ಲಿ, ಆಗ್ನೇಯ ಬಂಗಾಳ ಕೊಲ್ಲಿ ಮತ್ತು ನೈಋತ್ಯ ಬಂಗಾಳ ಕೊಲ್ಲಿಯಿಂದ ದೂರವಿರಲು ಸೂಚಿಸಲಾಗಿದೆ.