ಬೆಟ್ಟದಪುರ : ಗ್ರಾಮ ಸೇರಿದಂತೆ ವಿವಿಧ ಗ್ರಾಮೀಣ ಭಾಗದಲ್ಲಿ ಮೆಕ್ಯಾನಿಕ್ ಅಂಗಡಿಯಲ್ಲಿ ಹಾಗೂ ಮೋಟಾರ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬೆಟ್ಟದಪುರ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ರಾಹಿಂ, ಗೌಸ್, ಅಭಿಲಾಶ್, ಬೆಟ್ಟದಪುರ ಗ್ರಾಮದವರಾಗಿದ್ದು, ಪುಟ್ಟರಾಜು ರವರು ಸೆಣಬಿನಕುಪ್ಪೆ ಗ್ರಾಮ , ಅರಕಲಗೂಡು ತಾಲ್ಲೂಕು ಬಂದಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಏಪ್ರಿಲ್ ತಿಂಗಳಿನಲ್ಲಿ ಟ್ರ್ಯಾಕ್ಟರ್ ಮೆಕಾನಿಕ್, ಹಾಗೂ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಸುಮಾರು ₹1.50 ಲಕ್ಷ ರೂ ಬೆಲೆಬಾಳುವ ಕಬ್ಬಿಣದ ನೇಗಿಲು, ಡಿಸ್ಕ್, ಬಾಂಡ್ಲಿ, ನೀರೆತ್ತುವ ಮೋಟಾರ್ ಪಂಪ್, ಕೇಬಲ್ ಅನ್ನು ಕಳ್ಳತನ ಮಾಡಿ, ನಿರ್ಜನ ಪ್ರದೇಶದಲ್ಲಿ ಅವುಗಳೆಲ್ಲವನ್ನು ಜಜ್ಜಿ, ಮೈಸೂರಿನ ಬನ್ನಿಮಂಟಪದ ಸಮೀಪವಿರುವ ಗುಜ್ಜರಿ ಅಂಗಡಿಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಇದಲ್ಲದೆ ರಾತ್ರಿ ವೇಳೆ ಸುಳೆಕೋಟೆ ಗ್ರಾಮದ ಕೆರೆ ಮತ್ತು ಮರದೂರು ಮರಿಗೌಡನ ಕೊಪ್ಪಲು ಗ್ರಾಮದ ಸಮೀಪದಲ್ಲಿರುವ ನೀರು ಹರಿಯುವ ಹಳ್ಳಕ್ಕೆ ಅಳವಡಿಸಿದ್ದ ಒಂಬತ್ತು ಡೀಸಲ್ ಮೋಟರ್ ಗಳನ್ನು ಕಳ್ಳತನ ಮಾಡಿ ಗುಜ್ಜರಿಯಲ್ಲಿ ಮಾರಾಟ ಮಾಡಲಾಯಿತು (ಇದರ ಮೊತ್ತ ₹1.20 ಲಕ್ಷ) ಈ ಹಣವನ್ನು ಹಂಚಿಕೊಳ್ಳಲೆಂದು ಗ್ರಾಮದ ಹೊರಭಾಗದಲ್ಲಿ ನಾಲ್ವರು ಒಟ್ಟಿಗೆ ಸೇರಿದಾಗ ಪಾಲು ಹಂಚಿಕೊಳ್ಳುವುದರಲ್ಲಿ ಗಲಾಟೆ ಉಂಟಾಗಿ ಪೊಲೀಸರಿಗೆ ಮಾಹಿತಿ ತಿಳಿದು, ಅವರನ್ನು ವಿಚಾರಿಸಿದಾಗ ಅವರು ಕಳ್ಳತನ ಮಾಡಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪಿಎಸ್ಐ ಪ್ರಕಾಶ್ ಎಂ ಎತ್ತನಮನಿ, ಸಿಬ್ಬಂದಿ ದಿಲೀಪ್, ಶತ್ರುಘ್ನ, ಮಲ್ಲೇಶ್, ರುದ್ರೇಶ್, ಪ್ರೇಮ್ ಕುಮಾರ್, ಸತೀಶ್ ಇದ್ದರು.