ಗುಂಡ್ಲುಪೇಟೆ: ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಲೂಕಿನ ನಾನಾ ವಿವಿಧ ದೇವಾಲಯಗಳಲ್ಲಿ ಆರಾಧನೆ, ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ತಾಲೂಕಿನ ಕೋಡಹಳ್ಳಿ ಗ್ರಾಮದಲ್ಲಿ ಮಲೆ ಮಹದೇಶ್ವರ, ಭೀಮನಬೀಡು ಗ್ರಾಮದಲ್ಲಿ ಹಳ್ಳದಕೆರೆ ಮಹದೇಶ್ವರ, ಬೆರಟಹಳ್ಳಿ ಅಕ್ಷಯ ಮಹದೇಶ್ವರ, ಮದ್ದೂರು ಕಾಲೋನಿ ಮದ್ದೂರು ಮಹದೇಶ್ವರ, ಬೇರಂಬಾಡಿ ಕೆರೆತಡಿ ಮಹದೇಶ್ವರ, ಇಂಗಲವಾಡಿ ಮಹದೇಶ್ವರ, ಮಳವಳ್ಳಿ ಮಹದೇಶ್ವರ ಸೇರಿ ತಾಲೂಕಿನ ಎಲ್ಲಾ ಮಹದೇಶ್ವರ ಮತ್ತು ಇತರೆ ದೇವಾಲಯಗಳನ್ನು ತಳಿರು, ತೋರಣ ಮತ್ತು ವಿದ್ಯುತ್ ವಿಶೇಷವಾಗಿ ಅಲಂಕರಿಸಲಾಗಿತ್ತು. ಸುತ್ತಮುತ್ತಲ ಗ್ರಾಮಗಳ ಜನರು ಕಾಲ್ನಡಿಗೆ, ಸಾರಿಗೆ ಸಂಸ್ಥೆ ಮತ್ತು ಖಾಸಗೀ ಬಸ್, ಪ್ರಯಾಣಿಕರ ಆಟೋ ಇತರೆ ವಾಹನಗಳಲ್ಲಿ ದೇವಾಲಯಗಳಿಗೆ ಆಗಮಿಸಿ, ಸರದಿ ಸಾಲಿನಲ್ಲಿ ನಿಂತು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
ಭಕ್ತರಿಗೆ ಕೋಡಹಳ್ಳಿ, ಭೀಮನಬೀಡು, ಬೆರಟಹಳ್ಳಿ ಇತರೆ ಕಡೆಗಳಲ್ಲಿ ಸಾಮೂಹಿಕ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಕಡೆಗಳಲ್ಲಿ ಪ್ರಸಾದ ವಿತರಣೆ ಮಾಡಲಾಯಿತು.