ಮೈಸೂರು : ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ಬಿಜೆಪಿ ನಡೆಸಿದ ಎಲ್ಲ ಅಪಪ್ರಚಾರಗಳನ್ನು ರಾಜ್ಯದ ಮೂರು ಕ್ಷೇತ್ರಗಳ ಮತದಾರರು ಸಾರಾ ಸಗಟಾಗಿ ತಿರಸ್ಕರಿಸುವ ಮೂಲಕ ತಮ್ಮ ಮತ ಏನಿದ್ದರೂ ರಾಜ್ಯದ ಅಭಿವೃದ್ಧಿಗೆ ಎಂಬ ಸ್ಪಷ್ಟ ಸಂದೇಶವನ್ನು ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣದ ಮತದಾರರು ನೀಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರಾದ ಮೊಗಣ್ಣಾಚಾರ್ ಬಣ್ಣಿಸಿದ್ದಾರೆ.
ಉಪ ಚುನಾವಣೆ ಗೆಲುವನ್ನು ಸಂಭ್ರಮಿಸಿ ಮಾಧ್ಯಮ ಹೇಳಿಕೆ ನೀಡಿರುವ ಅವರು, ಮತದರಾರರು ಇಂದು ಬುದ್ಧಿವಂತರಾಗಿದ್ದು, ರಾಜ್ಯದ ಆಗು ಹೋಗುಗಳನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಯಾವುದು ಸತ್ಯ, ಯಾವುದು ಸುಳ್ಳು ಆರೋಪ ಎನ್ನುವುದು ಅವರಿಗೆ ಗೊತ್ತಿದೆ. ಬಿಜೆಪಿಯ ಅಪಪ್ರಚಾರಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಅಲ್ಲದೇ ಎಂದಿನಂತೆ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ಸಮುದಾಯ, ಸಣ್ಣ ಸಣ್ಣ ಜಾತಿಗಳು ನಿಂತಿವೆ. ಅವು ಯಾವುದೇ ಪ್ರಚಾರವಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆಮತ ನೀಡಿ ಸಿದ್ದರಾಮಯ್ಯ ಸರ್ಕಾರವನ್ನು ಬೆಂಬಲಿಸಿವೆ. ಈ ವಿಚಾರ ಕೂಡ ಮೂರು ಕ್ಷೇತ್ರಗಳ ಗೆಲುವಿಗೆ ಕಾರಣವಾಗಿದೆ.
ಮುಡಾ ಹಗರಣ ಹುಟ್ಟು ಹಾಕಿದ್ದೆ ಬಿಜೆಪಿ. ಬಿಜೆಪಿ ಸರ್ಕಾರದಲ್ಲಿ ನಡೆದ ಎಲ್ಲ ಅವ್ಯವಹಾರ ಅಕ್ರಮಗಳನ್ನು ಅವರು ಕಾಂಗ್ರೆಸ್ ಹೆಗಲಿಗೆ ಕಟ್ಟಲು ಬಯಸಿದ್ದರು. ಸುಖಾ ಸುಮ್ಮನೆ ಸಿಎಂ ಸಿದ್ದರಾiಯ್ಯ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ವ್ಯರ್ಥ ಪ್ರಯತ್ನ ನಡೆಸಿದ್ದಾರೆ. ಅಲ್ಲದೇ, ಯಾವತ್ತೂ ಇಲ್ಲದ ವಕ್ಫ್ ವಿವಾದ ಸೃಷ್ಟಿಸಿ ರಾಜ್ಯದಲ್ಲಿ ಕೋಮು ಭಾವನೆ ಬಿತ್ತುವ ಪ್ರಯತ್ನ ನಡೆಸಿ ಚುನಾವಣೆ ಗೆಲ್ಲಲು ಹೊರಟಿದ್ದವರಿಗೆ ಮತದಾರರು ಮಸಿ ಬಳಿದು ಕಳಿಸಿದ್ದಾರೆ. ಇನ್ನಾದರೂ ಬಿಜೆಪಿ ಮತ್ತು ಜೆಡಿಎಸ್ ಒಂದು ರಚನಾತ್ಮಕ ವಿರೋಧ ಪಕ್ಷವಾಗಿ ರಾಜ್ಯದಲ್ಲಿ ಕೆಲಸ ಮಾಡುವ ಮೂಲಕ ಆಡಳಿತ ಪಕ್ಷಕ್ಕೆ ಎಚ್ಚರಿಕೆ ನೀಡಬೇಕು ಎಂದು ಅವರು ಹೇಳಿದರು.