ಮೈಸೂರು: ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷ ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ಸಮರ್ಥವಾಗಿ ಆಡಳಿತ ನಡೆಸುತ್ತಿದೆ ಎಂದು ಒಪ್ಪಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಮತದಾರ ಕೊಡುಗೆ ನೀಡಿದ್ದಾನೆ ಎಂದು ನಗರ ಕಾಂಗ್ರೆಸ್ ವಕ್ತಾರ ಎಸ್.ರಾಜೇಶ್ ಹೇಳಿದರು.
ಉಪಚುನಾವಣೆ ಗೆಲುವಿನ ಸಂಭ್ರಮಾಚರಣೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ ಪಕ್ಷದ ಸಿದ್ದಾಂತಕ್ಕೆ ಸಿಕ್ಕಿದ ಗೆಲುವು. ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ದೇಶದೆಲ್ಲೆಡೆ ಹರಡಿದೆ. ಇದನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿ ಆಡಳಿತ ನಡೆಸುತ್ತಿರುವ ಇತರೆ ಯಾವ ರಾಜ್ಯದ ಮುಖ್ಯಮಂತ್ರಿಗಳಾಗಲೀ ಸ್ವತಃ ಪ್ರಧಾನಿಗೂ ಇಷ್ಟೋಂದು ಜನಪ್ರಿಯತೆ ಇಲ್ಲ. ಸಿಎಂ ಸಿದ್ದರಾಮಯ್ಯ ಅವರ ಜನಪ್ರಿಯತೆ ಕುಗ್ಗಿಸಲು ಅವರ ಹೆಸರಿಗೆ ಕಳಂಕ ತರಲು ವಿರೋಧ ಪಕ್ಷಗಳು ನಡೆಸಿದ ಎಲ್ಲ ತಂತ್ರ, ಕುತಂತ್ರಗಳು ಇದೀಗ ವಿಫಲವಾಗಿವೆ. ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಫುಲ್‌ಮಾರ್ಕ್ಸ್ ನೀಡಿ ಮುಂದಿನ ಮೂರೂವರೆ ವರ್ಷ ನೀವೇ ಸಮರ್ಥವಾಗಿ ಆಡಳಿತ ನಡೆಸಿ ಎಂದು ಬೆನ್ನು ತಟ್ಟಿದ್ದಾರೆ. ಇನ್ನಾದರೂ ಬಿಜೆಪಿ ಕೋಮುವಾದ ಬಿಟ್ಟು ರಾಜ್ಯದ ಅಭಿವೃದ್ಧಿ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲಿ ಇಲ್ಲದಿದ್ದಲ್ಲಿ ರಾಜ್ಯದಲ್ಲಿ ಬಿಜೆಪಿ ಮೂಲೆ ಗುಂಪಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಬಣ್ಣಿಸಿದರು.