Sunday, April 20, 2025
Google search engine

Homeಸ್ಥಳೀಯಸಾಧನೆಗೆ ಮಾಡಲು ಜವಾಬ್ದಾರಿ, ಉತ್ಸಾಹ ಇರಬೇಕು

ಸಾಧನೆಗೆ ಮಾಡಲು ಜವಾಬ್ದಾರಿ, ಉತ್ಸಾಹ ಇರಬೇಕು


ಮೈಸೂರು: ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಜವಾಬ್ದಾರಿ, ಆಸಕ್ತಿ ಮತ್ತು ಉತ್ಸಾಹ ಹಾಗೂ ಸಾಧಿಸುವ ಮನಸ್ಥಿತಿ ಹೊಂದಬೇಕು ಎಂದು ಉದ್ಯಮಿ ಸ್ಯಾಮ್‌ಚೆರಿಯನ್ ಸಲಹೆ ನೀಡಿದರು.
ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕಾಲೇಜಿನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮಹಮ್-೨೦೨೩ ರಾಷ್ಟ್ರೀಯ ಫೆಸ್ಟ್ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜವಾಬ್ದಾರಿ ಇದ್ದರೆ ಯಾವ ಸೋಲೂ ಸುಳಿಯುವುದಿಲ್ಲ. ವಿದ್ಯಾರ್ಥಿಗಳು ಸದಾ ಮನದಲ್ಲಿ ತಮ್ಮ ಉzಶದ ಬಗ್ಗೆ ಜಾಗೃತರಾಗಿರಬೇಕು. ಅಲ್ಲದೆ ಬದ್ಧತೆ ಮತ್ತು ಪರಿಶ್ರಮವನ್ನು ತಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿ ಜವಾಬ್ದಾರಿ ಇರುವಂತಹ ಒಬ್ಬ ನಾಯಕನಾಗಿರುತ್ತಾನೆ. ಯುವ ಜನಾಂಗ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳದೆ, ಅವರ ಆಸಕ್ತಿಗನುಗುಣವಾಗಿ ವ್ಯಾಸಂಗ ಮಾಡಿ ಗುರಿಯ ಪ್ರತಿಫಲದ ಪರಿಣಾಮದ ಕಡೆಗೆ ಶ್ರಮಿಸಿ, ದೃಢವಾಗಿ ಕೆಲಸ ಮಾಡಬೇಕು ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಸ್ತುತ ವಿದ್ಯಮಾನಗಳ ಕುರಿತು ಪರಿಣತಿ ಹೊಂದುತ್ತಿರಬೇಕು ಹಾಗೂ ಸಂಘಟಿತ ಮತ್ತು ರಚನಾತ್ಮಕ ಜೀವನ ಅಳವಡಿಸಿಕೊಳ್ಳಬೇಕು. ಯಶಸ್ಸಿಗೆ ವಯಸ್ಸು ಮತ್ತು ಸಮಯದ ಮಿತಿಯಿಲ್ಲ. ಮಹಾಜನ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಕಲೆ ಮತ್ತು ಸಾಂಸ್ಕೃತಿಕ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯನ್ನು ಹಿಂದಿನಿಂದಲೂ ಕಲ್ಪಿಸಿಕೊಡುತ್ತಿದೆ. ಆದ್ದರಿಂದಲೇ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿ ಪುರಸ್ಕೃತೆ ಹಿನ್ನೆಲೆ ಗಾಯಕಿ ಅನನ್ಯಭಟ್ ಮುಂತಾದವರ ಸಾಧನೆಗಳು ಅವಿಸ್ಮರಣೀಯ. ಮಹಾಜನ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದವರೂ ವಿಶ್ವದೆಲ್ಲೆಡೆ ಇದ್ದಾರೆ ಎಂದರು.
ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಮುರಳೀಧರ್ ಭಾಗವತ್ ಮಾತನಾಡಿ, ಮಹಮ್-೨೦೨೩ ಫೇಸ್ಟ್ ಅಂಗವಾಗಿ ಈ ಹಿಂದೆ ಆಯೋಜಿಸಿದ್ದ ಆಟೋ ಎಕ್ಸ್‌ಪೋ ಮತ್ತು ಕೆರಿಯರ್ ಎಕ್ಸ್‌ಪೋ ಎರಡೂ ಕಾರ್ಯಕ್ರಮಗಳಿಂದ ಹಲವು ಕೈಗಾರಿಕಾ ಸಂಸ್ಥೆಗಳೊಡನೆ ಮಹಾಜನ ವಿದ್ಯಾಸಂಸ್ಥೆಯ ಸಂಬಂಧ ಗಟ್ಟಿಯಾಗಿದೆ. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪೂಜಾ ಭಾಗವತ್ ಸ್ನಾತಕೋತ್ತರ ಕೇಂದ್ರಕ್ಕೆ ಸೇರುವ ಎಲ್ಲ ವಿದ್ಯಾರ್ಥಿಗಳಿಗೆ ಮಹಾಜನ ವಿದ್ಯಾಸಂಸ್ಥೆ ವಿದ್ಯಾರ್ಥಿ ವೇತನ ನೀಡುತ್ತದೆ ಎಂದು ಭರವಸೆ ನೀಡಿದರು. ಅಲ್ಲದೇ ಸ್ನಾತಕೋತ್ತರ ಕೇಂದ್ರದ ಜೀವವಿಜ್ಞಾನ ವಿಭಾಗದಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಪ್ರಯೋಗಾಲಯಗಳ ನವೀಕರಣಕ್ಕೆ ಸಿದ್ಧತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾಸಂಸ್ಥೆಯ ಗೌ.ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮಿ ಮುರಳೀಧರ್, ಪ್ರಾಚಾರ್ಯೆ ಬಿ.ಆರ್.ಜಯಕುಮಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆರ್.ರಮೇಶ್, ಮಹಮ್-೨೦೨೩ ರಾಷ್ಟ್ರೀಯ ಫೆಸ್ಟ್‌ನ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಚ್.ಆರ್.ತಿಮ್ಮೇಗೌಡ, ವಿದ್ಯಾರ್ಥಿ ಸಂಯೋಜಕರಾದ ರಿಷಬ್, ದೀಕ್ಷಿತ್, ಭೂಮಿಕಾ, ಜೋಯಿಸ್ ಇದ್ದರು.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಿಯಾಲಿಟಿ ಷೋ ನಿರೂಪಕ ನಿರಂಜನ್ ದೇಶಪಾಂಡೆ, ಚಲನಚಿತ್ರನಟಿ ಹಾಗೂ ಬಿಗ್‌ಬಾಸ್ ಖ್ಯಾತಿಯ ನಟಿಯರಾದ ಮಯೂರಿ, ದೀಪಿಕಾದಾಸ್ ಇತರರು ರಂಜಿಸಿದರು.

RELATED ARTICLES
- Advertisment -
Google search engine

Most Popular