ಯಳಂದೂರು: ಬಿಜೆಪಿ ಪಕ್ಷದ ಅಭ್ಯರ್ಥಿ ಮಹದೇವ ಪಟ್ಟಣ ಪಂಚಾಯಿತಿಯ ೫ ನೇ ವಾರ್ಡಿಗೆ ನಡೆದ ಉಪಚುನಾವಣೆಯಲ್ಲಿ ಗೆಲುವು ಪಡೆಯುವ ಮೂಲಕ ಪೌರಕಾರ್ಮಿಕರೊಬ್ಬರು ಪಪಂ ಸದಸ್ಯರಾಗಿ ಪ್ರಥಮವಾಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ ಅಡಳಿತರೂಢ ಕಾಂಗ್ರೆಸ್ ಪಕ್ಷದ ಶಾಸಕರೂ ಹಾಗೂ ೯ ಮಂದಿ ಸದಸ್ಯರಿದ್ದರೂ ಸೋಲುಂಟಾಗಿದ್ದು ಪಕ್ಷಕ್ಕೆ ಮುಖಭಂಗವಾಗಿದೆ.
ಇಲ್ಲಿನ ಪಪಂಗೆ ನ. ೨೩ ರಂದು ಚುನಾವಣೆ ನಡೆದಿತ್ತು. ಇಲ್ಲಿ ಸದಸ್ಯರಾಗಿದ್ದ ಕೆ. ಮಲ್ಲಯ್ಯ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರು. ಇವರು ಅಕಾಲಿಕ ಮರಣವನ್ನಪ್ಪಿದ್ದ ಹಿನ್ನೆಲೆಯಲ್ಲಿ ಈ ವಾರ್ಡ್‌ಗೆ ಚುನಾವಣೆ ನಿಗಧಿಯಾಗಿತ್ತು. ಮತ ಎಣಿಕೆಯು ಮಂಗಳವಾರ ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಚಲಾವಣೆಗೊಂಡ ೪೭೭ ಮತಗಳಲ್ಲಿ ಬಿಜೆಪಿಯ ಮಹದೇವ ೨೪೮ ಮತಗಳನ್ನು ಪಡೆದರೆ ಇವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಶಿಧರ್ ೨೨೪ ಮತಗಳನ್ನು ಪಡೆದರು, ನೋಟಾಗೆ ೦೫ ಮತಗಳು ಬಿದ್ದಿತು. ಹೀಗಾಗಿ ಚುನಾವಣಾಧಿಕಾರಿ ನಂಜುಂಡಯ್ಯ ಬಿಜೆಪಿ ಪಕ್ಷದ ಅಭ್ಯರ್ಥಿ ಮಹದೇವ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಿದರು.
ಶಾಸಕರಿಗೆ ಮುಖಭಂಗ: ಈ ವಾರ್ಡ್‌ನ ಚುನಾವಣೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿ ಪ್ರತಿ ಮನೆಮನೆಗಳಿಗೆ ತೆರಳಿ ಮತಯಾಚನೆ ಮಾಡಿದ್ದರು. ಅಲ್ಲದೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರೂ ಸೇರಿದಂತೆ ೯ ಮಂದಿ ಸದಸ್ಯರು ಕಾಂಗ್ರೆಸ್ ಪಕ್ಷದವರೇ ಆಗಿದ್ದರು. ಈ ಬಾರಿ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಕೆ. ಮಲ್ಲಯ್ಯ ರವರ ಮಗನೇ ಆಗಿದ್ದರಿಂದ ಗೆಲ್ಲುವ ಉತ್ಸಾಹದಲ್ಲಿದ್ದರು. ಆದರೆ ಮತದಾರ ಬದಲಾವಣೆ ಬಯಸಿದ್ದರಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ಇಲ್ಲಿನ ಪೌರ ಕಾರ್ಮಿಕ ಕಾಲೋನಿಯ ನಿವಾಸಿ ಮಹದೇವ ಗೆಲುವು ಸಾಧಿಸಿ ಅಚ್ಚರಿಯ ಫಲಿತಾಂಶ ನೀಡಿದ್ದಾರೆ.
ಬಲಿಷ್ಟವಾಗಿ ಕಾಂಗ್ರೆಸ್ ಸರ್ಕಾರ ಹಾಗೂ ಶಾಸಕರು ಇದ್ದರೂ ಕೂಡ ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿದಿದ್ದಾರೆ. ಹಾಗಾಗಿ ನಮಗೆ ಗೆಲುವು ಲಭಿಸಿದೆ. ಎಂದು ಬಿಜೆಪಿ ಮುಖಂಡ ಪಪಂ ಮಾಜಿ ಉಪಾಧ್ಯಕ್ಷೆ ಭೀಮಪ್ಪ ತಮ್ಮ ಸಂತಸ ಹಂಚಿಕೊಂಡರು. ಪಟಾಕಿ ಸಿಡಿಸಿ, ಸಿಹಿ ಹಂಚಿ, ಹಾರ ತುರಾಯಿಗಳನ್ನು ಹಾಕಿ ಮೆರವಣಿಗೆ ಮಾಡುವ ಮೂಲಕ ಬಿಜೆಪಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.
ಗೆದ್ದ ಅಭ್ಯರ್ಥಿ ಮಹದೇವ ಮಾತನಾಡಿ, ಪಪಂನ ಇತಿಹಾಸದಲ್ಲಿ ಪ್ರಪ್ರಥಮವಾಗಿ ಪೌರಕಾರ್ಮಿಕರೊಬ್ಬರು ಸದಸ್ಯರಾಗಿ ಆಯ್ಕೆಯಾಗಿರುವುದು ನನಗೆ ಅತೀವ ಸಂತಸ ತಂದಿದೆ. ನಾನು ನಮ್ಮ ಪಕ್ಷವನ್ನು ನಂಬಿದ್ದೆ. ಪಕ್ಷದ ಎಲ್ಲಾ ಕಾರ್ಯಕರ್ತರು ಮನೆಮನೆಗಳಿಗೆ ತೆರಳಿ ಮತಯಾಚಿಸಿದ್ದಾರೆ. ಅವರು ನನ್ನ ಗೆಲುವಲ್ಲ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಅವರಿಗೆ ಹಾಗೂ ವಾರ್ಡ್‌ನ ಎಲ್ಲಾ ಮತದಾರರರಿಗೂ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅಲ್ಲದೆ ವಾರ್ಡ್‌ನ ಅಭಿವೃದ್ಧಿಗೆ, ಮೂಲ ಸೌಲಭ್ಯಗಳ ನಿವಾರಣೆಗೆ ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.
ಬಿಜೆಪಿ ಪಕ್ಷದ ಮಂಡಲದ ಅಧ್ಯಕ್ಷ ಎನ್. ಅನಿಲ್, ಕಂದಹಳ್ಳಿ ಮಹೇಶ್, ಮಹೇಶ್, ಸೂರ್ಯನಾರಾಯಣ, ಗುರುಪ್ರಸಾದ್, ರಘು, ಎನ್. ಅಮಿತ್, ಕಿಟ್ಟಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಇದ್ದರು.