ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರಿನ ನಂತೂರು – ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಟೋಲ್ ಗೇಟ್ ಹೋರಾಟ ಸಮಿತಿ ಸುರತ್ಕಲ್ ವಿವಿಧ ಜನಪರ ಸಂಘಟನೆಗಳ ಸಹಯೋಗದೊಂದಿಗೆ ಕೂಳೂರು ಸೇತುವೆ ಬಳಿ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿತು.
ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಟೋಲ್ ಗೇಟ್ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಅವರು, ನಂತೂರು – ಸುರತ್ಕಲ್ ಹೆದ್ದಾರಿ ಅನೇಕ ಸಮಸ್ಯೆಗಳ ಆಗರವಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಪ್ರತೀ ವರ್ಷ ಪೂರ್ಣ ಪ್ರಮಾಣದಲ್ಲಿ ವೈಜ್ಞಾನಿಕ ರೀತಿಯಲ್ಲಿ ಡಾಮರೀಕರಣ ಮಾಡಬೇಕೆನ್ನುವ ನಿಯಮವಿದೆ. ಈ ಹೆದ್ದಾರಿ ಅತ್ಯಂತ ವಾಹನ ದಟ್ಟನೆಯ ಹೆದ್ದಾರಿಗಳಲ್ಲಿ ಒಂದು. ಇಲ್ಲಿ ಮಳೆಗಾಲದ ನಂತರ ಕಾಟಾಚಾರಕ್ಕೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ ಹೊರತು ಕಳೆದ 6ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ವೈಜ್ಞಾನಿಕ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಡಾಮರೀಕರಣ ಮಾಡಲಾಗಿಲ್ಲ. ಗುಂಡಿಗಳಿಗೆ ನೂರಾರು ಜನ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಹೆದ್ದಾರಿಯ ಸಂಪೂರ್ಣ ದುರಸ್ತಿಗೊಳಿಸಿ ಡಾಮರೀಕರಣ ಮಾಡಬೇಕು.
ಕೂಳೂರಿನ ಕಮಾನು ಸೇತುವೆ ಮುಚ್ಚಲು ಹೆದ್ದಾರಿ ಪ್ರಾಧಿಕಾರ ಸೂಚನೆ ನೀಡಿ 4 ವರ್ಷಗಳಾದರೂ ಹೊಸ ಸೇತುವೆಯ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ನಂತೂರು ಮೇಲ್ಸೇತುವೆಯನ್ನು ಕಾಲಮಿತಿ ಯಲ್ಲಿ ಪೂರ್ಣಗೊಳಿಸಬೇಕು ಎಂಬುವುದು ನಮ್ಮ ಬೇಡಿಕೆ ಎಂದರು.