ಚಾಮರಾಜನಗರ: ಸಕ್ರಿಯ ಕ್ಷಯರೋಗ ಪತ್ತೆಗಾಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಆಂದೋಲನಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ ಅವರು ಇಂದು ಚಾಲನೆ ನೀಡಿದರು.ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ನಡೆಸಲಾಗುವ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನಕ್ಕೆ ರೋಗ ವಿರುದ್ದ ಜಾಗೃತಿ ಕುರಿತ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯವರು ಇಂದಿನಿಂದ ಆಗಸ್ಟ್ 2ರವರೆಗೆ ಜಿಲ್ಲೆಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನವನ್ನು ನಡೆಸಲಾಗುತ್ತದೆ. ಈ ಆಂದೋಲನದಲ್ಲಿ ನಿಗದಿತ ಮನೆಗಳಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ, ಸಂಶಯಾಸ್ಪದ ಕ್ಷಯರೋಗಿಗಳು ಕಂಡುಬಂದಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಿ, ರೋಗ ಪತ್ತೆಯಾದಲ್ಲಿ ಚಿಕಿತ್ಸೆ ನೀಡಲಿದ್ದಾರೆ. ಇದೇ ಸಮಯದಲ್ಲಿ ಜನರಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸಿ, ಇದರ ಬಗ್ಗೆ ಇರುವ ಕಳಂಕ ತಾರತಮ್ಯ ಮತ್ತು ತಪ್ಪು ಅನಿಸಿಕೆಗಳನ್ನು ಹೋಗಲಾಡಿಸಲು ಕ್ರಮವಹಿಸಲಿದ್ದಾರೆ ಎಂದರು.ಕ್ಷಯರೋಗವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮವನ್ನು ನಡೆಸುತ್ತಿದೆ. 2025ಕ್ಕೆ ಕ್ಷಯ ಮುಕ್ತ ಭಾರತವನ್ನು ಮಾಡುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯನ್ನು ಕ್ಷಯಮುಕ್ತ ಎಂದು ಘೋಷಿಸಲು ಕಾರ್ಯಗತಗೊಳಿಸುವ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈಗಾಗಲೇ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸುತ್ತಿದ್ದು, ಖಾಸಗಿ ವಲಯದಲ್ಲಿ ಪತ್ತೆಯಾದ ಕ್ಷಯರೋಗಿಗಳಿಗೂ ಸಹ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಪೂವಿತಾ ಅವರು ತಿಳಿಸಿದರು. ಜಿಲ್ಲಾ ಕ್ಷಯರೋಗಾಧಿಕಾರಿ ಡಾ. ಎಂ.ಎಸ್. ರವಿಕುಮಾರ್ ಅವರು ಮಾಹಿತಿ ನೀಡಿ ಪ್ರಸ್ತುತ ಜಿಲ್ಲೆಯಲ್ಲಿ ಜನವರಿ-2023 ರಿಂದ 620 ಕ್ಷಯರೋಗಿಗಳು ಪತ್ತೆಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರಂತರವಾಗಿ ಎಲ್ಲಾ ಆಸ್ಪತ್ರೆಗಳಲ್ಲಿ ಕ್ಷಯರೋಗದ ಲಕ್ಷಣಗಳಾದ ಎರಡು ವಾರಕ್ಕಿಂತ ಹೆಚ್ಚಿಗೆ ಕೆಮ್ಮು, ಜ್ವರ, ಕಫದಲ್ಲಿ ರಕ್ತ, ಎದೆ ನೋವು, ರಾತ್ರಿ ವೇಳೆ ಬೆವರುವುದು, ತೂಕ/ಹಸಿವು ಕಡಿಮೆಯಾಗಿರುವುದು, ಕತ್ತಿನಲ್ಲಿ ಗಂಟುಗಳು ಮತ್ತು ಸುಸ್ತಾಗುವ ಲP್ಪ್ಷಣಗಳು ಇದ್ದಲ್ಲಿ ಕಫ ಪರೀಕ್ಷೆ ಮತ್ತು ಎಕ್ಸ್-ರೇ ಮೂಲಕ ಕ್ಷಯರೋಗ ಪತ್ತೆ ಮಾಡಲಾಗುವ್ಯದು. ವಿಶೇಷವಾಗಿ ಕ್ಷಯರೋಗವು ಸಕ್ಕರೆ ಕಾಯಿಲೆ ಇರುವವರಲ್ಲಿ, ಹಿಂದೆ ಕ್ಷಯರೋಗಿ ಇದ್ದ ಕುಟುಂಬದಲ್ಲಿ, ಅಪೌಷ್ಠಿಕತೆ ಇರುವವರಲ್ಲಿ, ಮದ್ಯಪಾನ, ಧೂಮಪಾನ ಮಾಡುವವರಲ್ಲಿ, ಇತರೆ ಕಾಯಿಲೆ ಇರುವವರಲ್ಲಿ ಸಂಭವಿಸುವುದು ಹೆಚ್ಚು ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಅಭಿಯಾನದಲ್ಲಿ ಒಟ್ಟು 201603 ಜನಸಂಖ್ಯೆಯನ್ನು ಒಳಗೊಂಡಿರುವ 45803 ಮನೆಗಳಿಗೆ ಒಟ್ಟು 158 ತಂಡಗಳು ಭೇಟಿ ಮಾಡಲಿದ್ದಾರೆ. ತಾಲ್ಲೂಕುವಾರು ಇಬ್ಬರು ಆರೋಗ್ಯ ಸಿಬ್ಬಂದಿಗಳನ್ನೊಳಗೊಂಡ ತಂಡಗಳು ಅಭಿಯಾನದ ಅವಧಿಯಲ್ಲಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಚಾಮರಾಜನಗರ ತಾಲೂಕಿನಲ್ಲಿ 77294 ಜನಸಂಖ್ಯೆಯುಳ್ಳ, 16813 ಮನೆಗಳಿಗೆ 56 ತಂಡಗಳು, ಗುಂಡ್ಲುಪೇಟೆ ತಾಲೂಕಿನಲ್ಲಿ 35843 ಜನಸಂಖ್ಯೆಯುಳ್ಳ, 8518 ಮನೆಗಳಿಗೆ 29 ತಂಡಗಳು, ಕೊಳ್ಳೇಗಾಲ ತಾಲೂಕಿನಲ್ಲಿ 31517 ಜನಸಂಖ್ಯೆಯುಳ್ಳ, 7399 ಮನೆಗಳಿಗೆ 21 ತಂಡಗಳು, ಹನೂರು ತಾಲೂಕಿನಲ್ಲಿ 25776 ಜನಸಂಖ್ಯೆಯುಳ್ಳ, 5951 ಮನೆಗಳಿಗೆ 31 ತಂಡಗಳು, ಯಳಂದೂರು ತಾಲೂಕಿನಲ್ಲಿ 31173 ಜನಸಂಖ್ಯೆಯುಳ್ಳ, 7122 ಮನೆಗಳಿಗೆ 21 ತಂಡಗಳು ಭೇಟಿ ಮಾಡಲಿವೆ ಎಂದು ಜಿಲ್ಲಾ ಕ್ಷಯರೋಗಾಧಿಕಾರಿ ಡಾ. ಎಂ.ಎಸ್. ರವಿಕುಮಾರ್ ವಿವರ ನೀಡಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಚಂದ್ರಶೇಖರ್, ಜಿಲ್ಲಾ ಕ್ಷಯ ಕೇಂದ್ರದ ಜಿಲ್ಲಾ ಮಟ್ಟದ ಅಧಿಕಾರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.