ಫಸ್ಟ್ ಕರ್ನಾಟಕ ಸ್ಟೇಟ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್
ಮೈಸೂರು: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ಜು.೧೫ ಹಾಗೂ ೧೬ರಂದು ಚಿಕ್ಕಬಳ್ಳಾಪುರದಲ್ಲಿ ನಡೆದ ರಾಜ್ಯ ಮಟ್ಟದ ಫಸ್ಟ್ ಕರ್ನಾಟಕ ಸ್ಟೇಟ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಮೈಸೂರಿನ ಎಸ್.ಲಿಷಿಕಾ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಮೈಸೂರಿನ ಎಲೈಟ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಂಸ್ಥೆ ಪ್ರತಿನಿಧಿಸಿದ್ದ ಲಿಷಿಕಾ, ನಗರದ ಟೆರೇಷಿಯನ್ ವಿದ್ಯಾಸಂಸ್ಥೆಯಲ್ಲಿ ೫ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ಫಸ್ಟ್ ಕರ್ನಾಟಕ ಸ್ಟೇಟ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನ ೯ರಿಂದ ೧೧ ವರ್ಷದೊಳಗಿನ ಬಾಲಕಿಯರ ಕ್ವಾರ್ಡ್ ಕೆಟಗರಿ ವಿಭಾಗದ ರೋಡ್ ಒನ್ ಲ್ಯಾಪ್ ನಲ್ಲಿ ಚಿನ್ನದ ಪದಕ ಹಾಗೂ ೧೦೦ ಮೀಟರ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ಲಿಷಿಕಾ ಅವರು ಮೈಸೂರಿನ ಎಲೈಟ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸಂಸ್ಥೆಯ ಆದಿತ್ಯ ಎಸ್.ರಾವ್ ಹಾಗೂ ಉಮಾ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಲಿಷಿಕಾ ಅವರ ತಂದೆ ಸಂಪತ್ ದ್ವಿಚಕ್ರ ವಾಹನ ರಿಪೇರಿ ಕೆಲಸಗಾರರಾಗಿದ್ದರೆ, ತಾಯಿ ಸಂಧ್ಯಾ ಗೃಹಿಣಿಯಾಗಿದ್ದಾರೆ. ಲಿಷಿಕಾ ಅವರ ಸಾಧನೆಗೆ ಟೆರೇಷಿಯನ್ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಹಾರ್ದಿಕವಾಗಿ ಅಭಿನಂದಿಸಿದೆ.