ಲಕ್ನೋ: ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳ ನಡೆಯುವ ಪ್ರದೇಶವನ್ನು ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರ ಹೊಸ ಜಿಲ್ಲೆಯನ್ನಾಗಿ ಘೋಷಿಸಿದೆ. 2025ರ ಜನವರಿಯಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೂ ಮೊದಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಹೊಸ ಜಿಲ್ಲೆಯನ್ನು ಮಹಾ ಕುಂಭಮೇಳ ಜಿಲ್ಲೆ ಎಂದು ಕರೆಯಲಾಗುತ್ತದೆ. ಮುಂದಿನ ವರ್ಷ ನಡೆಯುವ ಮಹಾ ಕುಂಭಮೇಳವನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಈ ನಿರ್ಧಾರ ಮಾಡಲಾಗಿದೆ. ಭಕ್ತಾದಿಗಳಿಗೆ ಅನುಭವವನ್ನು ಹೆಚ್ಚಿಸುವ ಮತ್ತು ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸರ್ಕಾರದ ಬದ್ಧತೆಯನ್ನು ಈ ಕ್ರಮವು ಪ್ರತಿಬಿಂಬಿಸುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ಮಹಾ ಕುಂಭಮೇಳ ಜಿಲ್ಲೆಯು ಸಂಪೂರ್ಣ ಮೆರವಣಿಗೆ ಮತ್ತು ನಾಲ್ಕು ತಹಸಿಲ್‌ಗಳ ಸದರ್, ಸೊರಾನ್, ಫುಲ್‌ಪುರ್ ಮತ್ತು ಕರ್ಚನಾಗಳ 67 ಗ್ರಾಮಗಳನ್ನು ಒಳಗೊಂಡಿದೆ. ಮಹಾಕುಂಭಮೇಳವನ್ನು 2025ರಲ್ಲಿ ಆಯೋಜಿಸಲಾಗಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿದೆ. ಮಹಾಕುಂಭ 2025ರ ಸಿದ್ಧತೆಗಳನ್ನು ಪರಿಶೀಲಿಸಲು, ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಡಿಸೆಂಬರ್ 13ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯಲಿದೆ.