ಬೆಂಗಳೂರು: ಚಂಡಮಾರುತದ ಪ್ರಭಾವ ಶನಿವಾರದಿಂದ ರಾಜಧಾನಿ ಬೆಂಗಳೂರಿನಲ್ಲಿ ಆರಂಭಗೊಂಡಿರುವ ಮಳೆ ಭಾನುವಾರ ಹಾಗೂ ಸೋಮವಾರವೂ ಮುಂದುವರೆದಿದ್ದು, ಜಿಟಿ-ಜಟಿ ಮಳೆ, ಮೋಡ ಮುಸುಕಿನ ವಾತಾವರಣ, ಮೈಕೊರೆವ ಚಳಿ ಸೃಷ್ಟಿಯಾಗಿದೆ.
ಫೆಂಗಲ್ ಚಂಡಮಾರುತದಿಂದಾಗಿ ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರು ನಗರ ಮತ್ತು ಗ್ರಾಮಾಂತರ ಮತ್ತು ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮಂಗಳವಾರದವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 100 ಮಿ.ಮೀ.ಗೂ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಮುಂದಿನ 48 ಗಂಟೆಗಳಲ್ಲಿ ಹವಾಮಾನವು ತೀವ್ರವಾಗಿ ಬದಲಾಗುವ ನಿರೀಕ್ಷೆಯಿದೆ ಮತ್ತು ಚಂಡಮಾರುತದ ಪರಿಣಾಮ ಬುಧವಾರದವರೆಗೆ ಇರಲಿದ್ದು, ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.