ಹಾಸನ: ಜೀಪ್ ಪಲ್ಟಿಯಾಗಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಗೊರೂರು ಪೊಲೀಸ್ ಠಾಣೆಯಲ್ಲಿ ಜೀಪ್ ಚಾಲಕ ಮಂಜೇಗೌಡ ವಿರುದ್ಧ ಎಫ್‌ಐಆರ್ ದಾಖಲಾಗಿರುತ್ತದೆ.
ಹಾಸನ ತಾಲೂಕಿನ ಕಿತ್ತಾನೆಗಡಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾದ ಪರಿಣಾಮ ಗಂಭೀರ ಗಾಯಗೊಂಡಿದ್ದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ (೨೬) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ೯:೩೦ರ ವೇಳೆಗೆ ಮೃತಪಟ್ಟಿದ್ದರು. ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಹರ್ಷಬರ್ಧನ್ ಅವರು ಮೃತಪಟ್ಟಿದ್ದಾರೆ.
ಮೂಲತಃ ಬಿಹಾರದವರಾದ ಹರ್ಷಬರ್ಧನ ಮದ್ಯಪ್ರದೇಶದ ಸಿಂಗ್ರುಲಿಯಲ್ಲಿ ವಾಸವಾಗಿದ್ದರು. ಅಖಿಲೇಶ್ ಕುಮಾರ್ ಸಿಂಗ್ ಹಾಗೂ ಡೋಲಿ ಸಿಂಗ್ ದಂಪತಿಯ ಪುತ್ರ ಹರ್ಷಬರ್ಧನ್. ಹರ್ಷಬರ್ಧನ್ ಸಿವಿಲ್ ಇಂಜಿನಿಯರಿಂಗ್ ಪದವಿಧರರಾಗಿದ್ದು, ಸರ್ಕಾರಿ ಕೆಲಸಕ್ಕೂ ಸೇರಿಕೊಂಡಿದ್ದರು. ಆದರೆ, ಅವರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆಂಬುದು ಅವರ ಕನಸಾಗಿತ್ತು. ಅದರಂತೆ ೨೦೨೨ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆದ ಅವರು ೧೫೩ನೇ ರ್‍ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ.
ಹರ್ಷಬರ್ಧನ್ ಅವರು ಇಲಾಖಾ ತರಬೇತಿ ಮುಗಿಸಿ ೪ ವಾರ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಟ್ರೈನಿಂಗ್ ಮುಗಿಸಿದ್ದರು. ಬಳಿಕ, ಅವರು ಹಾಸನ ಜಿಲ್ಲೆಗೆ ಡಿವೈಎಸ್‌ಪಿಯಾಗಿ ನಿಯೋಜನೆಗೊಂಡಿದ್ದರು. ಈ ಹಿನ್ನೆಲೆ ಹಾಸನ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಪೊಲೀಸ್ ಇಲಾಖೆಯ ಜೀಪ್ ಮೂಲಕ ಮೈಸೂರಿನಿಂದ ಹಾಸನಕ್ಕೆ ತೆರಳುತ್ತಿದ್ದರು.
ಈ ವೇಳೆ ಹಾಸನ ತಾಲೂಕಿನ ಕಿತ್ತಾನೆಗಡಿ ಗ್ರಾಮದ ಬಳಿ ಅತಿಯಾದ ವೇಗದಲ್ಲಿ ಬರುತ್ತಿದ್ದ ಜೀಪ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಇಳಿದಿದೆ. ಬಳಿಕ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು, ಪಲ್ಟಿಯಾಗಿದೆ. ಈ ಅವಘಡದಲ್ಲಿ ಹರ್ಷಬರ್ಧನ್ ಅವರು ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.