ನವದೆಹಲಿ: ದೇಶದಲ್ಲಿ ಮಾರಾಟವಾಗುತ್ತಿರುವ ೨,೯೮೮ ಔಷಧ ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಮತ್ತು ೨೮೨ ಔಷಧಿಗಳು ಕಲಬೆರಕೆ ಅಥವಾ ನಕಲಿಯಾಗಿರುವುದು ಪರೀಕ್ಷೆಯಲ್ಲಿ ಕಂಡುಬಂದಿದೆ ಎಂದು ಆರೋಗ್ಯ ಸಚಿವರು ರಾಜ್ಯಸಭೆಗೆ ತಿಳಿಸಿದ್ದಾರೆ.
೨೦೨೩ರ ಏಪ್ರಿಲ್‌ನಿಂದ ೨೦೨೪ರ ಮಾರ್ಚ್‌ವರೆಗಿನ ಅವಧಿಯಲ್ಲಿ ೧,೦೬,೧೫೦ ಔಷಧ ಮಾದರಿಗಳನ್ನು ಪರೀಕ್ಷಿಸಲಾಗಿದೆ. ನಕಲಿ ಅಥವಾ ಕಲಬೆರಕೆ ಔಷಧಗಳ ತಯಾರಿಕೆ, ಮಾರಾಟ ಮತ್ತು ವಿತರಣೆಗಾಗಿ ೬೦೪ ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ನಕಲಿ, ಕಲಬೆರಕೆ ಹಾಗೂ ಪ್ರಮಾಣಿತವಲ್ಲದ ಔಷಧಗಳ ಮಾರಾಟ ತಡೆಯುವ ಸಲುವಾಗಿ, ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ರಾಜ್ಯ ಔಷಧ ನಿಯಂತ್ರಕರೊಂದಿಗೆ ೨೦೨೨ರ ಡಿಸೆಂಬರ್‌ನಿಂದ ಔಷಧ ತಯಾರಿಕಾ ಸಂಸ್ಥೆಗಳ ಅಪಾಯ-ಆಧಾರಿತ ತಪಾಸಣೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.