ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ೧೪ ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ವರ್ಗಾಯಿಸುವಲ್ಲಿ ಹಲವಾರು ಅಕ್ರಮಗಳು ನಡೆದಿರುವುದು ಸಾಬೀತಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ.
ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಇತ್ತೀಚೆಗೆ ಕಳುಹಿಸಿದ ಮಾಹಿತಿಯಲ್ಲಿ, ಮುಡಾ ಬೇನಾಮಿ ಮತ್ತು ಇತರ ವಹಿವಾಟುಗಳ ಮೂಲಕ ಒಟ್ಟು ೧,೦೯೫ ಸೈಟ್‌ಗಳನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಿರುವುದ ತನಿಖೆಯಿಂದ ತಿಳಿದುಬಂದಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ. ಸಿಎಂ ಪತ್ನಿಗೆ ಸೈಟ್ ವರ್ಗಾವಣೆ ಮಾಡುವ ವೇಳೆ ಕಾನೂನು ಮಾರ್ಗಸೂಚಿಗಳ ಉಲ್ಲಂಘನೆ ಮಾಡಲಾಗಿದೆ. ಮಾಹಿತಿ ತಿರುಚುವಿಕೆ, ಕಚೇರಿ ಕಾರ್ಯವಿಧಾನಗಳ ಉಲ್ಲಂಘನೆ, ಅನಗತ್ಯ ಒಲವು ಮತ್ತು ಪ್ರಭಾವದ ಬಳಕೆ ಮತ್ತು ಸಹಿಗಳ ನಕಲಿ ಸಾಕ್ಷಿಗಳು ಪತ್ತೆಯಾಗಿವೆ ಎಂದು ಇಡಿ ಹೇಳಿಕೊಂಡಿದೆ. ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಎಸ್.ಜಿ.ದಿನೇಶ್ ಕುಮಾರ್ ಅಲಿಯಾಸ್ ಸಿ.ಟಿ.ಕುಮಾರ್ ಈ ಪ್ರಕ್ರಿಯೆಯಲ್ಲಿ ಅನಗತ್ಯ ಪ್ರಭಾವ ಬೀರಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ ದೊರೆತಿವೆ ಎಂದು ಸಂಸ್ಥೆ ಹೇಳಿಕೊಂಡಿದೆ.
೭೦೦ ಕೋಟಿ ರೂಪಾಯಿಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯದ ಒಟ್ಟು ೧,೦೯೫ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದು ಬಹಿರಂಗಗೊಂಡಿದೆ. ಹೀಗಾಗಿ ಮುಡಾ ಹಗರಣ ಪಾರ್ವತಿ ಅವರಿಗೆ ಸೈಟ್ ಹಂಚಿಕೆ ಮಾಡಿದ ಪ್ರಕರಣದಲ್ಲೇ ಕೊನೆಗೊಳ್ಳುವುದಿಲ್ಲ ಎಂದು ತನಿಖಾ ವರದಿ ತಿಳಿಸಿದೆ.
ಭೂಮಿ ಕಳೆದುಕೊಂಡವರ ಸೋಗಿನಲ್ಲಿ ಬೇನಾಮಿ ಅಥವಾ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಸೈಟ್?ಗಳನ್ನು ಹಂಚಿಕೆ ಮಾಡಲಾಗಿದೆ. ಈ ಅಕ್ರಮ ಹಂಚಿಕೆಗಳ ಫಲಾನುಭವಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಪ್ರಭಾವಿ ವ್ಯಕ್ತಿಗಳು” ಎಂದು ಜಾರಿ ನಿರ್ದೇಶನಾಲಯದ ತನಿಖೆಯಿಂದ ತಿಳಿದುಬಂದಿದೆ. ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಸಿಎಂ ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಭೂಮಿಯನ್ನು ಖರೀದಿಸಿ ಪಾರ್ವತಿಗೆ ಉಡುಗೊರೆ ನೀಡಿದ ದೇವರಾಜು ಮತ್ತು ಇತರರ ವಿರುದ್ಧ ಕರ್ನಾಟಕ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದೀಗ ಜಾರಿ ನಿರ್ದೇಶನಾಲಯ ಅಕ್ರಮ ಹಣವರ್ಗಾವಣೆ ಆರೋಪದ ಮೇಲೆ ತನಿಖೆ ನಡೆಸುತ್ತಿದೆ.
ಲೋಕಾಯುಕ್ತರ ಎದುರು ಹಾಜರಾಗಿದ್ದ ಸಿಎಂ ಪತ್ನಿ ತಾವು ಅಥವಾ ತಮ್ಮ ಕುಟುಂಬದಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಪದೇ ಪದೇ ಹೇಳಿದ್ದಾರೆ. ಪ್ರತಿಪಕ್ಷಗಳು ಮಾಡುತ್ತಿರುವ ರಾಜಕೀಯ ಪ್ರೇರಿತ ಆರೋಪ ಎಂದೇ ಹೇಳುತ್ತಿದ್ದಾರೆ.
ಮೈಸೂರಿನ ವಿಜಯನಗರ ಬಡಾವಣೆಯ ೩ ಮತ್ತು ೪ನೇ ಹಂತಗಳಲ್ಲಿ ಪಾರ್ವತಿ ಅವರಿಗೆ ೧೪ ನಿವೇಶನಗಳನ್ನು ಮಂಜೂರು ಮಾಡಲಾಗಿದ್ದು, ಮುಡಾ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ವಿಸ್ತೀರ್ಣಕ್ಕೆ ಹೋಲಿಸಿದರೆ ಹೆಚ್ಚಿನ ಆಸ್ತಿ ಮೌಲ್ಯವನ್ನು ಹೊಂದಿದೆ ಎಂದು ಆರೋಪಿಸಲಾಗಿದೆ. ಮುಡಾ ೩.೧೬ ಎಕರೆ ಭೂಮಿಗೆ ಬದಲಾಗಿ ೫೦:೫೦ ಅನುಪಾತದ ಯೋಜನೆಯಡಿ ಪಾರ್ವತಿಗೆ ನಿವೇಶನಗಳನ್ನು ಮಂಜೂರು ಮಾಡಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇತ್ತೀಚೆಗೆ ಲೋಕಾಯುಕ್ತಕ್ಕೆ ಕಳುಹಿಸಲಾದ ಸಂವಹನದಲ್ಲಿ, ನಿವೇಶನಗಳ ಹಂಚಿಕೆಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ೧೪ ಸೈಟ್ ಗಳನ್ನು ಪಾರ್ವತಿಗೆ ಕಾನೂನುಬಾಹಿರವಾಗಿ ಹಂಚಿಕೆ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಸಿಎಂ ಪತ್ನಿ ಪಾರ್ವತಿ ಅವರಿಗೆ ಸೈಟ್ ಗಳನ್ನು ಹಂಚಿಕೆ ಮಾಡಿದಾಗ, ಅವರ ಮಗ ಯತೀಂದ್ರ ವರುಣಾ ಕ್ಷೇತ್ರದ ಶಾಸಕರಾಗಿದ್ದರು. ಹೀಗಾಗಿ ಅವರು ಮುಡಾ ಮಂಡಳಿಯ ಸದಸ್ಯರಾಗಿದ್ದರು ಎಂದು ಇಡಿ ಹೇಳಿದೆ. ಈ ಅವಧಿಯಲ್ಲಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಸದರಿ ಭೂಮಿಯ ಡಿನೋಟಿಫಿಕೇಷನ್ ಪ್ರಕ್ರಿಯೆಯು “ಚರ್ಚೆ ಅಥವಾ ದಾಖಲೆಗಳ ವಿಶ್ಲೇಷಣೆಯನ್ನು ಆಧರಿಸಿಲ್ಲ ಎಂದು ಇಡಿ ಹೇಳಿದೆ.