ಮೈಸೂರು: ಅವಧಿ ಮೀರಿದ್ದರೂ ವಿದ್ಯುತ್ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕ್ರಮಕ್ಕೆ ಸೆಸ್ಕ್ ಮುಂದಾಗಿದೆ. ನಿಗದಿತ ಅವಧಿಯೊಳಗೆ ಶುಲ್ಕ ಪಾವತಿ ಮಾಡದಿದ್ದಲ್ಲಿ, ಅಂತಹ ಸ್ಥಾವರಗಳಿಗೆ ವಿದ್ಯುತ್ ಕಡಿತಗೊಳಿಸಲು ತೀರ್ಮಾನಿಸಿದೆ.
ಕೆಲವು ಗ್ರಾಹಕರು, ಗ್ರಾಮ ಪಂಚಾಯತಿ ಕುಡಿಯುವ ನೀರು, ಬೀದಿ ದೀಪ ಸ್ಥಾವರಗಳನ್ನು ಒಳಗೊಂಡಂತೆ ವಿದ್ಯುತ್ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಅವಧಿ ಮೀರಿದ್ದರೂ ವಿದ್ಯುತ್ ಶುಲ್ಕ ಹಾಗೂ ಹೆಚ್ಚುವರಿ ಭದ್ರತಾ ಠೇವಣಿಯನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಈ ರೀತಿಯಾಗಿ ಬಿಲ್ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ವಿದ್ಯುತ್ ಕಡಿತಗೊಳಿಸಲು ಸೆಸ್ಕ್ ನಿರ್ಧರಿಸಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಪ್ರಕಾರ ವಿದ್ಯುತ್ ಸರಬರಾಜಿನ, ವಿತರಣಾ ಲೈಸೆನ್ಸ್‌ದಾರರ ಷರತ್ತುಗಳು ೨೦೦೪ ಅನುಬಂಧ-೦೪ರ ನಿಯಮ ೪.೧೮(ಜೆ) ಪ್ರಕಾರ ಗ್ರಾಹಕರು ಬಿಲ್ ಪಾವತಿಗೆ ನೀಡಿದ ದಿನಾಂಕದೊಳಗೆ ಬಿಲ್ ಪಾವತಿಸದಿದ್ದರೆ, ನಿಗದಿತ ಗಡುವಿನ ದಿನಾಂಕದ ನಂತರ ಶುಲ್ಕ ಪಾವತಿಸಿದವರಿಗೆ 15 ದಿನಗಳ ಸ್ಪಷ್ಟ ನೋಟೀಸ್ ನೀಡಿ, ಬಾಕಿ ಪಾವತಿಸಿದ ಕಾರಣಕ್ಕೆ ವಿದ್ಯುತ್ ಸ್ಥಾಪನೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಲೈಸೆನ್ಸ್‌ದಾರರು ಹೊಂದಿರುತ್ತಾರೆ”. ಕೆಳಗಿನ ನಿಯಮ ೨.೧೧ರ ಪ್ರಕಾರ
ಬಿಲ್ ವಿತರಿಸಿದ ಬಳಿಕ ೧೫ ದಿನಗಳ ಅವಧಿ ಬಿಲ್ ಪಾವತಿಗೆ ಅಂತಿಮ ಗಡುವಾಗಿರುತ್ತದೆ.” “ಗ್ರಾಹಕರಿಗೆ ನೀಡುವ ಬಿಲ್‌ನ ಹಿಂಬದಿಯ ಸೂಚನೆ ೧ರಲ್ಲಿ ನಿಗದಿತ ದಿನದೊಳಗೆ ಬಿಲ್ ಪಾವತಿಸದಿದ್ದಲ್ಲಿ ಈ ಬಿಲ್ ಅನ್ನೇ ವಿದ್ಯುತ್ ಸರಬರಾಜು ನಿಲ್ಲಿಸುವ ೧೫ ದಿನಗಳ ನೋಟೀಸ್ ಎಂದು ಪರಿಗಣಿಸಬೇಕು ಎಂದು ನಮೂದಿಸಲಾಗಿದೆ ಹಾಗೂ ಹಿಂದಿನ ಬಾಕಿಗೆ ವಾಯ್ದೆ ದಿನಾಂಕ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿರುತ್ತದೆ.