ಬೆಂಗಳೂರು : ಕಳೆದ ತಿಂಗಳಲ್ಲಿ 15 ದಿನಗಳಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದು, ಈ ಘಟನೆ ಮಾಸು ಮುನ್ನವೇ ಇಂದು ಬಳ್ಳಾರಿಯಲ್ಲಿ ಮತ್ತೊರ್ವ ಬಾಣಂತಿ ಸಾವನಪ್ಪಿದ್ದಾಳೆ. ಈ ಎಲ್ಲಾ ಪ್ರಕರಣಗಳ ಸಂಬಂಧಪಟ್ಟಂತೆ ಇದರಲ್ಲಿ ನನ್ನ ತಪ್ಪಿದ್ದರೆ ನಾನು ರಾಜೀನಾಮೆ ಕೊಡಲು ಸಿದ್ಧ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ನನ್ನ ತಪ್ಪಿದ್ದರೆ ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಬಿಜೆಪಿಯವರು ಲೋಕಾಯುಕ್ತಕ್ಕೆ ಖಂಡಿತವಾಗಿ ದೂರು ಕೊಡಲಿ. ಇದರಲ್ಲಿ ನನ್ನ ಪ್ರತಿಷ್ಠೆ ಏನೂ ಇಲ್ಲ ಇದು ಜೀವದ ವಿಚಾರವಾಗಿದೆ ಎಂದು ಅವರು ತಿಳಿಸಿದರು.
ರಾಜೀನಾಮೆಯಿಂದ ಸರಿಯಾಗುತ್ತೆ ಅಂದರೆ ನಾನು ರಾಜೀನಾಮೆ ನೀಡಲು ಸಿದ್ಧ. ಆದರೆ ಈ ಪ್ರಕರಣದಲ್ಲಿ ಸರ್ಕಾರ ಗಂಭೀರವಾಗಿದೆ. ಇಂತಹ ಸಾವು ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕ್ರಮ ಆಗಲೇಬೇಕು. 2024ರಲ್ಲಿ ರಾಜ್ಯದಲ್ಲಿ ಇದುವರೆಗೂ 327 ಮೆಟರ್ನಲ್ ಸಾವಾಗಿದೆ ಎಲ್ಲವನ್ನು ಪರಿಶೀಲಿಸಲು ಹೇಳಿದ್ದೇವೆ ಎಂದರು.
ಇಂಥ ಪ್ರಕರಣದಲ್ಲಿ ಸಹನೆ ಇರಬಾರದು ಕಠಿಣ ಕ್ರಮ ಆಗಬೇಕು ಫಾರ್ಮಸ್ಯುಟಿಕಲ್ ಕಂಪನಿಗಳನ್ನು ರಕ್ಷಿಸುವ ಕಾನೂನುಗಳಾಗಿ ಹೋಗಿವೆ. ತಪ್ಪು ಮಾಡಿದರೆ ಶಿಕ್ಷೆ ಕೊಡುವಲ್ಲಿ ನಮ್ಮ ಕಾನೂನುಗಳು ವಿಫಲವಾಗಿವೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.