ಬೆಂಗಳೂರು: ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರವು ಬಳ್ಳಾರಿ ಕುರಿತು ಸಂವೇದನಾಶೀಲತೆಯನ್ನು ಸಂಪೂರ್ಣ ಕಳೆದುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ೫ ಬಾಣಂತಿಯರ ಸಾವು, ನವಜಾತ ಶಿಶುಗಳ ಮರಣ ಸಂಖ್ಯೆಯಲ್ಲಿ ಹೆಚ್ಚಳ ಕುರಿತು ಬೇಸರ ವ್ಯಕ್ತಪಡಿಸಿದರು.
೨೦೧೩ರಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಮೊದಲು ಸಿದ್ದರಾಮಯ್ಯನವರು ಬಳ್ಳಾರಿ ಬಗ್ಗೆ ಜಪ ಮಾಡುತ್ತಿದ್ದರು ಎಂದು ಟೀಕಿಸಿದರು. ಭ್ರಷ್ಟಾಚಾರದಿಂದ ಕಳಪೆ ಗುಣಮಟ್ಟದ ಔಷಧಿ ಸರಬರಾಜಾಗಿದೆ; ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ದೂರಿದರು.ಮುಡಾ, ವಾಲ್ಮೀಕಿ, ಅಬಕಾರಿ ಹಗರಣಗಳಿಂದ ಸಂರಕ್ಷಿಸಿಕೊಳ್ಳಲು ಮುಖ್ಯಮಂತ್ರಿಗಳು ಆಡಳಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಉಡಾಫೆಯ ಮಾತನ್ನಾಡುತ್ತಿದ್ದಾರೆ ಎಂದು ಟೀಕಿಸಿದರು.
ಆರೋಗ್ಯ ಕ್ಷೇತ್ರ ರಾಜ್ಯ ಸರಕಾರದ ಪ್ರಮುಖ ವಿಷಯ. ಮಳೆ ಜಾಸ್ತಿಯಾದರೂ, ಜನಸಂಖ್ಯೆ ಹೆಚ್ಚಾದರೂ ಕಡಿಮೆ ಆದರೂ ಅದೆಲ್ಲದಕ್ಕೂ ಕೇಂದ್ರ ಸರಕಾರ ಕಾರಣ ಎನ್ನುವ ಜನ ಇವರು ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.ದಿನೇಶ್ ಗುಂಡೂರಾವ್ ಅವರಿಗೆ ಸಂವೇದನಾಶೀಲತೆ ಇಲ್ಲ; ಸಿದ್ದರಾಮಯ್ಯನವರ ಬಾಲಬಡುಕರಂತೆ ವರ್ತಿಸುವುದರಲ್ಲಿ ಅವರು ಸಂತೃಪ್ತಿ ಕಾಣುತ್ತಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಅವರಿಗೆ ನೈತಿಕತೆ ಇದ್ದರೆ ಮೊದಲು ರಾಜೀನಾಮೆ ಕೊಡಬೇಕಾಗಿತ್ತು ಎಂದು ಒತ್ತಾಯಿಸಿದರು.
ಇವೆಲ್ಲ ಡ್ರಾಮ ಕಂಪೆನಿ ಎಂದು ಟೀಕಿಸಿದರು.ಉಸ್ತುವಾರಿ ಸಚಿವರು, ದಿನೇಶ್ ಗುಂಡೂರಾಯರು, ವೈದ್ಯಕೀಯ ಶಿಕ್ಷಣ ಸಚಿವರೂ ಸೇರಿ ಯಾರೊಬ್ಬರೂ ಬಳ್ಳಾರಿಗೆ ಭೇಟಿ ಕೊಟ್ಟಿಲ್ಲ. ಹೋಗಿ ನೋಡ್ರಿ ಎಂದು ಮುಖ್ಯಮಂತ್ರಿ ಹೇಳಿದ್ದಾಗಿ ಮಾಧ್ಯಮಗಳಲ್ಲಿ ಬಂದಿದೆ. ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ; ಆದರೂ ಹೋಗಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.