ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಸಂಪನ್ನಗೊಂಡಿದೆ. ಮುಂಜಾನೆ ವೃಶ್ಚಿಕ ಲಗ್ನ ಮುಹೂರ್ತದಲ್ಲಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣರಾಗಿ, ಮಹಾರಥೋತ್ಸವ ಜರುಗಿತು. ಅಲ್ಲದೆ ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾಗಿ ಚಿಕ್ಕ ರಥೋತ್ಸವವೂ ನಡೆಯಿತು. ಮೊದಲು ಸುವರ್ಣ ವೃಷ್ಠಿಯಾಗಿ, ಚಿಕ್ಕ ರಥೋತ್ಸವ ನೆರವೇರಿದ ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ಜರುಗಿತು. ಬಳಿಕ ಷಷ್ಠಿ ಕಟ್ಟೆಯಲ್ಲಿ ಮತ್ತು ಒಳಾಂಗಣದ ಕಟ್ಟೆಯಲ್ಲಿ ಅವಳಿ ದೇವರಿಗೆ ಪೂಜೆ ನಡೆಯಿತು.
ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಮಹಾರಥೋತ್ಸವ ಸಂದರ್ಭವನ್ನು ಕಣ್ತುಂಬಿಕೊಂಡು, ಶ್ರೀ ದೇವರಿಗೆ ಜಯಘೋಷ ಹಾಕಿದರು.

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಈ ಉತ್ಸವವು ರಾಜ್ಯದಲ್ಲೇ ಅತೀದೊಡ್ಡ ಉತ್ಸವವಾಗಿಯೂ ಪ್ರಖ್ಯಾತಿ ಪಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಲ್ಲಿನ ಮಲೆಕುಡಿಯ ಆದಿವಾಸಿ ಜನಾಂಗದವರು ಚಂಪಾಷಷ್ಠಿ ವೇಳೆಯಲ್ಲಿ ವಿಶಿಷ್ಟವಾಗಿ ಬೆತ್ತದಿಂದ ಬ್ರಹ್ಮರಥವನ್ನು ನಿರ್ಮಿಸುವುದು ಪಾರಂಪರಿಕ ವಿಶೇಷತೆಯಾಗಿ ಇಂದಿಗೂ ಉಳಿದಿದೆ. ಬೃಹತ್ ಬ್ರಹ್ಮರಥವನ್ನು ಪ್ರತ್ಯೇಕವಾಗಿ ಹಗ್ಗಗಳ ಬಳಕೆ ಇಲ್ಲದೆ ಬರೀ ಬಿದಿರು ಮತ್ತು ಬೆತ್ತದಿಂದ ಕೌಶಲ್ಯಕರವಾಗಿ ನಿರ್ಮಿಸುವುದು ಇದರ ವಿಶಿಷ್ಟತೆ. ಶ್ರೀ ದೇವರ ಬ್ರಹ್ಮ ರಥೋತ್ಸವವೇ ಕುಕ್ಕೆ ಸುಬ್ರಹ್ಮಣ್ಯ ಜಾತ್ರೆಯ ಆಕರ್ಷಣೆ.