ಮದ್ದೂರು: ಎಚ್.ಕೆ.ವೀರಣ್ಣಗೌಡ ಪದವಿ ಪೂರ್ವ ಕಾಲೇಜು ಮದ್ದೂರು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಮಂಡ್ಯ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮದ್ದೂರು ಇವರ ಸಂಯುಕ್ತ ಆಶ್ರಯದಲ್ಲಿ, ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಬಗ್ಗೆ ಪ್ರೇರಣಾತ್ಮಕ ಕಾರ್ಯಗಾರವನ್ನ ಇಂದು ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮದ್ದೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಕಾಳಿರಯ್ಯನವರು ವಿದ್ಯಾರ್ಥಿಗಳ ಎಸ್.ಎಸ್. ಎಲ್.ಸಿ ಫಲಿತಾಂಶವನ್ನು ಉತ್ತಮಪಡಿಸಲು, ಶಿಕ್ಷಣ ಇಲಾಖೆ ಸಾಕಷ್ಟು ಕಾರ್ಯಗಾರಗಳನ್ನ ಆಯೋಜಿಸುತ್ತಿದ್ದು, ಈ ನಿಟ್ಟಿನಲ್ಲಿ ಎಚ್.ಕೆ.ವೀರಣ್ಣಗೌಡ ಕಾಲೇಜಿನ ಆಡಳಿತ ಮಂಡಳಿಯು ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತಾ ಬಂದಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಆಡಿದಂತಹ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಸಿ.ಅಪೂರ್ವ ಚಂದ್ರ ರವರು, ವಿದ್ಯಾರ್ಥಿಗಳು ಪರೀಕ್ಷೆಯ ಬಗೆಗೆ ಇರುವ ಭಯ, ಆತಂಕವನ್ನು ದೂರ ಮಾಡಿಕೊಂಡು, ಪರೀಕ್ಷೆಯನ್ನು ಒಂದು ಹಬ್ಬದ ರೀತಿಯಲ್ಲಿ ಸಂಭ್ರಮಿಸಬೇಕೆಂದು ತಿಳಿ ಹೇಳಿದರು. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹೆಚ್ಚಿನ ಮಟ್ಟದಲ್ಲಿ ಕೌಶಲಗಳ ಅವಶ್ಯಕತೆ ಇರುವುದರಿಂದ ಅದನ್ನು ಪರಿಪೂರ್ಣಗೊಳಿಸಲು ಅಂತರಾಷ್ಟ್ರೀಯ ಮಟ್ಟದ ತರಬೇತುದಾರರಿಂದ ಈ ಕಾರ್ಯಗಾರವನ್ನ ನಮ್ಮ ಕಾಲೇಜಿನಲ್ಲಿ ಆಯೋಜಿಸಲಾಗಿದ್ದು, ಅದರ ಉಪಯುಕ್ತತೆಯನ್ನು ಮದ್ದೂರು ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಹಾಗೆಯೇ ಫಲಿತಾಂಶವನ್ನು ಉತ್ತಮಪಡಿಸಿಕೊಂಡು ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಆಶಿಸಿದರು.
ನಂದೀಶ್ವರ ಕೌಶಲ್ಯ ಸಂಸ್ಥೆಯ ಅಧ್ಯಕ್ಷರು ಹಾಗೂ ಅಂತರಾಷ್ಟ್ರೀಯ ಜೀವನ ಕೌಶಲ್ಯ ತರಬೇತುದಾರ ಶ್ರೀ ನಂದೀಶ್ ಬಿ ಶೆಟ್ಟರ್ ಅವರು, ವಿದ್ಯಾರ್ಥಿಗಳು ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಮನೋಬಲ ಆತ್ಮಸ್ಥೈರವನ್ನು ಹೆಚ್ಚಿಸಿಕೊಂಡು,ಪರೀಕ್ಷೆಯನ್ನು ಸಕಾರಾತ್ಮಕವಾಗಿ ಎದುರಿಸುವ ನಿಟ್ಟಿನಲ್ಲಿ ಹಲವಾರು ಪ್ರೇರಣಾತ್ಮಕ ಉದಾಹರಣೆಗಳ ಮೂಲಕ ಉತ್ತರಿಸಿ, ತಮ್ಮ ಕಾರ್ಯಾಗಾರವನ್ನು ಅರ್ಥಪೂರ್ಣವಾಗಿ ನೆರವೇರಿಸಿಕೊಟ್ಟರು.
ವೇದಿಕೆಯಲ್ಲಿ ಮದ್ದೂರಿನ ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರರಾದ ನಂದೀಶ್ ಬಿ ಶೆಟ್ಟರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕಾಳೀರಯ್ಯ, ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಸಿ.ಅಪೂರ್ವ ಚಂದ್ರ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪ್ರಕಾಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುರೇಂದ್ರ, ಅನಂತೇಗೌಡ, ಶಂಕರೇಗೌಡರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಬೋಧಕ ಬೋಧಕೇತರ ವರ್ಗದವರು ಹಾಗೂ ಮದ್ದೂರು ತಾಲೂಕಿನ ಸುಮಾರು 52 ಶಾಲೆಗಳಿಂದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.