ಗುಂಡ್ಲುಪೇಟೆ: ಕ್ಷಯ ರೋಗ ಮುಕ್ತ ಭಾರತ ಮಾಡಲು ಪ್ರತಿಯೊಬ್ಬ ನಾಗರೀಕರು ಕೈ ಜೋಡಿಸಬೇಕು ಎಂದು ಭೀಮನಬೀಡು ಗ್ರಾಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್ ಮನವಿ ಮಾಡಿದರು.
ತಾಲೂಕಿನ ಭೀಮನಬೀಡು ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮ ಅಂಗವಾಗಿ ನಡೆದ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭೀಮನಬೀಡು ಗ್ರಾಪಂ ವ್ಯಾಪ್ತಿಯಲ್ಲಿ ಮೂರು ಮಂದಿ ಕ್ಷಯ ರೋಗಿಗಳಿದ್ದಾರೆ. ಇವರು ಸಕಾಲದಲ್ಲಿ ಚಿಕಿತ್ಸೆ ಪಡೆಯಬೇಕು. ಗ್ರಾಮದಲ್ಲಿ ಜು.18ರಿಂದ ಜು.25ರವೆರೆಗೆ ತಪಾಸಣೆ ನಡೆಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
2025ಕ್ಕೆ ಕ್ಷಯ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕೆಂದು ಭಾರತ ಪಣ ತೊಟ್ಟಿದೆ. ಅದರೊಳಗೆ ದೇಶದಿಂದ ಬೇರು ಸಹಿತವಾಗಿ ಕಿತ್ತು ಹೋಗೆಯಬೇಕಾಗಿದೆ. ಪ್ರತಿ ಕ್ಷಯ ರೋಗಿಗೆ ಭಾರತ ಸರ್ಕಾರ ಐದು ನೂರು ರೂ.ಗಳನ್ನು ಅವರ ಖಾತೆಗೆ ಜಮಾ ಮಾಡುತ್ತದೆ. ಕಾರಣ ಕ್ಷಯ ರೋಗಿಗಳು ಪೌಷ್ಟಿಕ ಆಹಾರ ಮತ್ತು ಹಣ್ಣು ಹಂಪಲುಗಳನ್ನು ಸೇವಿಸಲು ಎಂದು ತಿಳಿಸಿದರು.
ಕ್ಷಯ ರೋಗವನ್ನು ಗ್ರಾಮ ಮಟ್ಟದಲ್ಲೇ ಚಿವುಟಿ ಹಾಕಬೇಕು ಈ ರೋಗ ಲಕ್ಷಣಗಳು ಕಂಡು ಬಂದ ಕೂಡಲೆ ಸ್ಥಳೀಯ ಆಶಾ ಕಾರ್ಯಕರ್ತೆಯರನ್ನು ಮತ್ತು ಅರೋಗ್ಯ ಸಿಬ್ಬಂದಿಯನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು. ಕ್ಷಯ ರೋಗವು ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯುಲೋಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ಕ್ಷಯ ರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರ ಬರುವ ತುಂತುರುಗಳಿಂದ ಈ ರೋಗಾಣುಗಳು ಗಾಳಿ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಅವನಿಗೆ ಸೋಂಕು ಉಂಟಾಗುತ್ತದೆ. ಎರಡು ವಾರ ಅಥವಾ ಅದಕ್ಕಿಂತ ಮೇಲ್ಪಟ್ಟ ಸತತವಾದ ಕೆಮ್ಮು, ಜ್ವರ, ಸಂಜೆ ವೇಳೆ ಜ್ವರ ಬರುವುದು, ಎದೆಯಲ್ಲಿ ನೋವು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು, ಕಫದಲ್ಲಿ ರಕ್ತ ಬೀಳುವುದು ಕ್ಷಯ ರೋಗದ ಲಕ್ಷಣಗಳಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೀಮನಬೀಡು ಗ್ರಾಮ ಪಂಚಾಯತಿ ಸದಸ್ಯರಾದ ಜಿ.ಸ್ವಾಮಿ, ರಮೇಶ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೋಜೇಶ್, ಆರೋಗ್ಯಾಧಿಕಾರಿ ವಿಜಯಲಕ್ಷ್ಮಿ, ಅಶ್ವಿನಿ, ಮುಖಂಡರಾದ ಸುಲೇಮಾನ್, ನಾಗಮಲ್ಲು, ರಾಮಯ್ಯ ಸೇರಿದಂತೆ ಇತರರು ಹಾಜರಿದ್ದರು.