ಗುಂಡ್ಲುಪೇಟೆ: ಚಿರತೆ ದಾಳಿಗೆ ಹಸುವೊಂದು ಬಲಿಯಾಗಿರುವ ಘಟನೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕಡಬೂರು ಗ್ರಾಮದ ಸಿದ್ದಮ್ಮ ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ಜಮೀನಿನಲ್ಲಿ ಮೇವು ಮೇಯ್ಯುತ್ತಿದ್ದ ವೇಳೆ ಚಿರತೆ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿದೆ. ಇದರಿಂದ ಮಾಲೀಕರಿಗೆ ತೀವ್ರ ನಷ್ಟ ಉಂಟಾಗಿದ್ದು, ಘಟನೆಯಿಂದ ಭಯಭೀತರಾಗಿದ್ದಾರೆ.
ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದ್ದು, ಆಗಿದ್ದಾಂಗ್ಗೆ ಫಸಲಿನ ಮೇಲೆ ಲಗ್ಗೆಯಿಟ್ಟು ನಾಶ ಪಡಿಸುವ ಜೊತೆಗೆ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಪರಿಹಾರ ದೊರಕಿಸಿಕೊಡುವ ಜೊತೆಗೆ ಬೋನ್ ಇರಿಸಿ ಚಿರತೆ ಸೆರೆಗೆ ಕ್ರಮ ವಹಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.