ಮೈಸೂರು: ಮೈಸೂರು- ಕೊಡಗು ಸಂಸದ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ – ತ್ರಿಷಿಕಾ ದಂಪತಿಯ ಕಿರಿಯ ಪುತ್ರನಿಗೆ ಇಂದು ಚಾಮುಂಡಿ ಬೆಟ್ಟದಲ್ಲಿ ತೊಟ್ಟಿಲು ಶಾಸ್ತ್ರ ನೆರವೇರಿತು.
ಎರಡು ತಿಂಗಳ ಹಿಂದೆ ಮೈಸೂರು ದಸರಾ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತ್ರಿಷಿಕಾ ದಂಪತಿಗೆ ಎರಡನೇ ಪುತ್ರ ಜನಿಸಿತ್ತು. ಇದೀಗ ಇಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿ ತೊಟ್ಟಿಲು ಶಾಸ್ತ್ರ ಹಾಗೂ ನಾನಾ ಪೂಜಾಕಾರ್ಯಗಳು ನೆರವೇರಿದವು.
ದೇವಿಗೆ ಪೂಜೆ ಕಾರ್ಯಗಳು ಮುಗಿದ ನಂತರ ಚಾಮುಂಡಿಬೆಟ್ಟದಲ್ಲಿ ದೇವಾಲಯದ ಬಳಿ ಇರುವ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟಿ ಪೂಜೆ ಸಲ್ಲಿಸಲಾಯಿತು. ಬಳಿಕ ತೊಟ್ಟಿಲು ಶಾಸ್ತ್ರ ನೆರವೇರಿಸಲಾಯಿತು. ಈ ವೇಳೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಉಪಸ್ಥಿತರಿದ್ದರು. ಯದುವೀರ್ ತ್ರಿಷಿಕಾ ದಂಪತಿಯ ಮೊದಲ ಪುತ್ರ ಆದ್ಯವೀರ್ 2017ರ ಡಿಸೆಂಬರ್ 6 ರಂದು ಜನಿಸಿದ್ದರು.