ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳದ ಅಧ್ಯಕ್ಷರಾಗಿ ಕೆ.ಆರ್.ನಗರ ತಾಲೂಕಿನ ಕೆಸ್ತೂರುಕೊಪ್ಪಲು ಗ್ರಾಮದ ಎಂ.ರಮೇಶ್, ಉಪಾಧ್ಯಕ್ಷರಾಗಿ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪಟ್ಟಣದ ಕಾಶೀನಾಥ ಹುಡೇದ ಅವಿರೋಧವಾಗಿ ಆಯ್ಕೆಯಾದರು.
ಬೆಂಗಳೂರು ನಗರದ ಹೆಬ್ಬಾಳದಲ್ಲಿರುವ ಸಂಘದ ಕಛೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರಿಬ್ಬರನ್ನು ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಹೆಚ್.ಎನ್.ಶಿವೇಗೌಡ ಆಯ್ಕೆ ಪ್ರಕಟಿಸಿದರು.
ನಿರ್ದೇಶಕರಾದ ಪಂಡಿತ್‌ರಾವ್‌ಚಿದರಿ, ಕಾಶಿಲಿಂಗಹುಡೆದ, ಮಹಾಲಿಂಗಪ್ಪ, ದೀಪಕ್, ಸಂಗಪ್ಪವಾಲಿಕರ್, ವಿಠಲ್‌ಮಾಯಪ್ಪ, ಶಾಂತನಗೌಡ, ಲಿಂಗರಾಜು, ಕೆ.ರಾಮಪ್ಪ, ನಾಗೇಶ್, ಈರಯ್ಯ, ಮಹಾ ಮಂಡಳದ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಚುನಾವಣಾ ಸಭೆಯಲ್ಲಿ ಹಾಜರಿದ್ದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ರಮೇಶ್ ಮಾತನಾಡಿ ಮಹಾ ಮಂಡಳದ ಅಧ್ಯಕ್ಷ ಸ್ಥಾನವನ್ನು ಮೊದಲ ಬಾರಿಗೆ ಹಳೆ ಮೈಸೂರು ಭಾಗಕ್ಕೆ ನೀಡಿದ್ದು ನಾನು ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಗರಾಭಿವೃದ್ದಿ ಸಚಿವ ಭೈರತಿಸುರೇಶ್, ಶಾಸಕರಾದ ಡಿ.ರವಿಶಂಕರ್,
ಯತೀಂದ್ರ ಸಿದ್ದರಾಮಯ್ಯ ಮತ್ತು ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರ ಸಹಕಾರ ಮತ್ತು ಮಾರ್ಗದರ್ಶನ ಪಡೆದು ಮಹಾ ಮಂಡಳದ ಸದಸ್ಯರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಲಿದ್ದು ನನಗೆ ಎಲ್ಲರೂ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಕೋರಿದರು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ಡಿ.ರವಿಶಂಕರ್ ನೇತೃತ್ವದಲ್ಲಿ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ಎಂ.ರಮೇಶ್ ಅಭಿನಂಧಿಸಿದರು.