Monday, April 21, 2025
Google search engine

Homeಸ್ಥಳೀಯಚಾಮುಂಡಿಬೆಟ್ಟದಲ್ಲಿ ಅನಧಿಕೃತವಾಗಿ ಇರುವವರ ತೆರವುಗೊಳಿಸಿ

ಚಾಮುಂಡಿಬೆಟ್ಟದಲ್ಲಿ ಅನಧಿಕೃತವಾಗಿ ಇರುವವರ ತೆರವುಗೊಳಿಸಿ


ಮೈಸೂರು: ಚಾಮುಂಡಿಬೆಟ್ಟದ ಪಾವಿತ್ಯ್ರತೆ ಕಾಪಾಡುವ ನಿಟ್ಟಿನಲ್ಲಿ ಅನಧಿಕೃತವಾಗಿ ನೆಲೆಸಿರುವವರನ್ನು ತೆರವುಗೊಳಿಸಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿಬೆಟ್ಟದ ಮೂಲನಿವಾಸಿಗಳು ಅಲ್ಲಿಯೇ ಇರಲಿ. ಆದರೆ, ಹೊರಗಿನಿಂದ ಬಂದವರನ್ನು ತೆರವುಗೊಳಿಸುವ ಅವಶ್ಯಕತೆ ಇದೆ. ರಾಜ್ಯ ಸರ್ಕಾರ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದು ಸ್ವಾಗತಾರ್ಹ. ಬೆಟ್ಟದಲ್ಲಿ ಹೊರಗಿನವರು ಖರೀದಿಸಿರುವ ಜಾಗವನ್ನು ಪ್ರಾಧಿಕಾರ ಖರೀದಿಸಿ ತಮ್ಮ ವಶದಲ್ಲಿ ಇಟ್ಟುಕೊಳ್ಳಬೇಕು. ಅದೇ ರೀತಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು. ಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ೪೫ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅಲ್ಲದೆ ಹುಂಡಿ ಹಣ ೧೩೦ ಕೋಟಿ ರೂ. ಇರುವ ಹಿನ್ನೆಲೆಯಲ್ಲಿ ಬೆಟ್ಟದ ಅಭಿವೃದ್ಧಿಗೆ ಅನುದಾನದ ಅವಶ್ಯಕತೆ ಇಲ್ಲ. ಹಾಗಾಗಿ ಬೆಟ್ಟದ ಪಾವಿತ್ರೃತೆ ಉಳಿಸಲು ಬೆಟ್ಟಕ್ಕೆ ಸಂಬಂಧಪಡದವರನ್ನು ತೆರವುಗೊಳಿಸುವ ಕಾರ್ಯ ಮಾಡಬೇಕು ಆ ಮೂಲಕ ಬೆಟ್ಟದಲ್ಲಿ ಹೊಸ ಕಟ್ಟಡಗಳು ನಿರ್ಮಾಣವಾಗದಂತೆ ಎಚ್ಚರ ವಹಿಸಬೇಕು ಎಂದರು.
ಬೆಟ್ಟದಿಂದ ತೆರವುಗೊಳ್ಳಲು ಇಚ್ಛಿಸುವವರಿಗೋಸ್ಕರ ಪ್ರತ್ಯೇಕ ಬಡಾವಣೆ ನಿರ್ಮಾಣ ಮಾಡಲು ಬಿಜೆಪಿ ಸರ್ಕಾರ ಮುಂದಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಯೋಜನೆ ಕಾರ್ಯಗತಗೊಳ್ಳಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾದರೂ ಈ ಯೋಜನೆ ಜಾರಿಯಾಗಲಿ. ಜತೆಗೆ ಬಹಳ ವರ್ಷಗಳಿಂದ ದಸರಾ ಪ್ರಾಧಿಕಾರ ರಚನೆ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಇದಕ್ಕೆ ಸಾಕಷ್ಟು ಪ್ರಯತ್ನ ಮಾಡಲಾಯಿತು. ಈಗಿನ ಸರ್ಕಾರವಾದರೂ ದಸರಾ ಪ್ರಾಧಿಕಾರ ರಚನೆ ಮಾಡಬೇಕು ಎಂದು ಹೇಳಿದರು.
ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಈ ಬಾರಿ ಮುಂಗಾರು ದುರ್ಬಲಗೊಂಡಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಜುಲೈ ಹಾಗೂ ಆಗಸ್ಟ್‌ನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಬಾರಿಯೂ ಈ ಎರಡು ತಿಂಗಳಿನಲ್ಲಿ ಮಳೆ ಸುರಿಯುವ ವಿಶ್ವಾಸ ಇದೆ. ಉತ್ತಮ ಮಳೆಯಾಗಲಿ ಎಂದು ಕಾವೇರಿ ಮಾತೆ ಹಾಗೂ ಇಗ್ಗುತಪ್ಪ ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆಯ ಹಾದಿ ತುಳಿಯಬಾರದು ಎಂದು ರೈತರಲ್ಲಿ ಮನವಿ ಮಾಡಿದರು.
ರಾಜಕೀಯ ಹೇಳಿಕೆಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ, ಜನರ ಒಳಿತಿಗೋಸ್ಕರ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕಡೆಗೆ ಮಾತ್ರ ನಾನು ಗಮನ ಹರಿಸುತ್ತಿzನೆ. ಹಾಗಾಗಿ ರಾಜಕೀಯ ಕುರಿತು ಹೇಳಿಕೆ ನೀಡಲು ಬಯಸುವುದಿಲ್ಲ. ವಿಧಾನಸಭೆ ಚುನಾವಣೆ ಸಂದರ್ಭ ೫ ತಿಂಗಳು ಸಮಯವನ್ನು ಕ್ರಿಮಿನಲ್ ಆಗಿ ವೇಸ್ಟ್ ಮಾಡಿzನೆ. ಇನ್ನು ಮುಂದೆ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ. ಜನರ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ಹೇಳಿದರು.

ಸ್ವದೇಶಿ ದರ್ಶನ್‌ನಲ್ಲಿ ವಸ್ತುಪ್ರದರ್ಶನ ಅಭಿವೃದ್ಧಿ: ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಸ್ವದೇಶಿ ದರ್ಶನ್ ಯೋಜನೆ ಕಾಮಗಾರಿಯನ್ನು ವರ್ಷಾಂತ್ಯದೊಳಗೆ ಪ್ರಾರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ಒಟ್ಟು ೮೦ ಕೋಟಿ ರೂ.ಮೊತ್ತದ ಯೋಜನೆಯಾಗಿದೆ. ರಾಜ್ಯದ ಹಂಪಿ ಹಾಗೂ ಮೈಸೂರಿಗೆ ಕೇಂದ್ರ ಸರ್ಕಾರ ಸ್ವದೇಶಿ ದರ್ಶನ್ ಯೋಜನೆ ಮಂಜೂರು ಮಾಡಲಾಗಿದೆ. ಈ ಯೋಜನೆ ಜಾರಿಯಿಂದ ವಸ್ತು ಪ್ರದರ್ಶನ ಆವರಣಕ್ಕೆ ವರ್ಷದ ೩೬೫ ದಿನವೂ ಪ್ರವಾಸಿಗರನ್ನು ಸೆಳೆಯಬಹುದು. ಸರ್ವಋತು ಪ್ರವಾಸೋದ್ಯಮ ಪರಿಕಲ್ಪನೆಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಯೋಜನೆ ಕುರಿತು ಇಂದು ಪ್ರಾಥಮಿಕ ಹಂತದ ಸಭೆ ನಡೆಸಲಾಗಿದೆ. ಯೋಜನೆಯ ಮೊದಲ ಹಂತದ ಸಮಗ್ರ ಯೋಜನಾ ವರದಿ (ಡಿಪಿಆರ್)ಯನ್ನು ೨೦ ದಿನಗಳ ಒಳಗೆ ಸಲ್ಲಿಸುವಂತೆ ಯೋಜನೆಯನ್ನು ಅನುಷ್ಠಾನಗೊಳಿಸುವ ಡೆಲಾಯ್ಟ ಕಂಪನಿಗೆ ನಿರ್ದೇಶನ ನೀಡಲಾಗಿದೆ. ವಸ್ತುಪ್ರದರ್ಶನ ಆವರಣದಲ್ಲಿ ಸಾಂಸ್ಕೃತಿಕ ಕೇಂದ್ರ ನಿರ್ಮಾಣ ಮಾಡುವ ಉದ್ದೇಶವಿದೆ. ಈ ಕೇಂದ್ರದಲ್ಲಿ ನಿರ್ಮಾಣ ಮಾಡುವ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾಜಕೀಯ ಕಾರ್ಯಕ್ರಮ, ವಿವಾಹ ಮುಂತಾದ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುವುದು. ಇದರಿಂದ ಪ್ರಾಧಿಕಾರಕ್ಕೆ ಹೆಚ್ಚಿನ ಆದಾಯ ದೊರೆಯುವ ನಿರೀಕ್ಷೆ ಇದೆ ಎಂದರು.
ಈ ಕೇಂದ್ರದಲ್ಲಿ ಮೈಸೂರಿನ ಜಿಐ ಉತ್ಪನ್ನಗಳು ಹಾಗೂ ಚನ್ನಪಟ್ಟಣದ ಗೊಂಬೆ ಸೇರಿದಂತೆ ರಾಜ್ಯದ ವಿವಿಧ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದು. ನಗರದ ಹಲವು ಕಡೆಗಳಲ್ಲಿ ನಕಲಿ ಮೈಸೂರು ಸಿಲ್ಕ್ ಸೀರೆಗಳು ಮಾರಾಟವಾಗುತ್ತಿದ್ದು, ಪ್ರವಾಸಿಗರಿಗೆ ಮೋಸ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದನ್ನು ತಪ್ಪಿಸಲು ಮೈಸೂರು ಸಿಲ್ಕ್ ಸೇರಿದಂತೆ ಮೈಸೂರಿನ ಪ್ರತಿಯೊಂದು ಜಿಐ ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಮಳಿಗೆ ತೆರೆಯಲಾಗುವುದು ಎಂದು ಹೇಳಿದರು.
ವಸ್ತು ಪ್ರದರ್ಶನ ಆವರಣ ೮೦ ಎಕರೆ ವಿಸ್ತೀರ್ಣ ಹೊಂದಿದ್ದು, ೮೦ ಎಕರೆ ಸುತ್ತ ಬೇಲಿ ನಿರ್ಮಾಣ ಮಾಡಲಾಗುವುದು. ಒಟ್ಟು ೮ ಎಕರೆ ಪ್ರದೇಶದಲ್ಲಿ ಸ್ವದೇಶಿ ದರ್ಶನ್ ಯೋಜನೆ ಅನುಷ್ಠಾನಗೊಳಿಸಲಾಗುವುದು. ಸಾಂಸ್ಕೃತಿಕ ಕೇಂದ್ರದ ಬಳಿಯಲ್ಲಿಯೇ ಶಾಪಿಂಗ್ ಮಳಿಗೆಗಳು, ಬಯಲು ರಂಗಮಂದಿರ, ಫುಡ್‌ಕೋರ್ಟ್ ನಿರ್ಮಾಣ ಮಾಡಲಾಗುವುದು. ಕುಸ್ತಿಯನ್ನು ಸಹ ಇಲ್ಲಿ ನಿರಂತರವಾಗಿ ಮಾಡುವ ಆಲೋಚನೆ ಇದೆ ಎಂದರು.

RELATED ARTICLES
- Advertisment -
Google search engine

Most Popular